ದೊಡ್ಡ ದೊಡ್ಡ ಹೋಟೆಲ್ ಗಳಿಗೆ ಹೋದಾಗ ನಿಮ್ಮ ಕಾರನ್ನು ಅಲ್ಲಿನ ವ್ಯಾಲೆಟ್ ಪಾರ್ಕಿಂಗ್ ಸಿಬ್ಬಂದಿಗೆ ನೀಡ್ತೀರಾ…ಸ್ವಲ್ಪ ನಿಲ್ಲಿ ಇನ್ಮುಂದೆ ಹಿಂದೆ ಮುಂದೆ ಯೋಚಿಸದೆ ಹೀಗೆ ಹೋಟೆಲ್ ಸಿಬ್ಬಂದಿ ಕೈಗೆ ಕಾರಿನ ಬೀಗ ಕೊಡುವ ಮುನ್ನ ಎಚ್ಚರ.
ಯಾಕಂದ್ರೆ ನಿಮ್ಮ ಕಾರು ನೀವು ಕೊಟ್ಟಾಗ ಹೇಗಿತ್ತೋ ಹಾಗೆಯೇ ವಾಪಸ್ ಬರುತ್ತೋ ಇಲ್ವೋ ಗೊತ್ತಿಲ್ಲ. ಮೊನ್ನೆ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ಗೆ ಊಟಕ್ಕೆ ಹೋಗಿದ್ದ ಮಹಿಳೆಯೊಬ್ಬರು ತಮ್ಮ ಮರ್ಸಡೀಸ್ ಬೆಂಜ್ EQE ಎಲೆಕ್ಟ್ರಿಕ್ SUVಯನ್ನು ಪಾರ್ಕ್ ಮಾಡಲು ನೀಡಿದ್ದಾರೆ.
ಆದರೆ, ಯಾವಾಗ ವಾಪಸ್ ಬಂದು ಕಾರ್ ಕೇಳಿದ್ರೋ ಆಗಲೇ ಶಾಕ್ ಎದುರಾಗಿದ್ದು. 1.4 ಕೋಟಿ ಬೆಲೆಯ ದುಬಾರಿ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿ ಹೋಗಿತ್ತು. ಈ ಬಗ್ಗೆ ಹೋಟೆಲ್ ಸಿಬ್ಬಂದಿ ಕೇಳಿದರೆ ಚಾಲಕ ಪರಾರಿಯಾಗಿದ್ದಾನೆ ಎಂದಿದ್ದರು.
ಈ ಬಗ್ಗೆ ಮಹಿಳೆ ಠಾಣೆಗೆ ದೂರು ಕೂಡಾ ನೀಡಿದ್ದರು. 12 ಲಕ್ಷದ ರಿಪೇರಿ ಖರ್ಚಿದ್ದರೂ ಖಾಕಿ 2 ಲಕ್ಷಕ್ಕೆ ಸೆಟಲ್ ಮೆಂಟ್ ಮಾಡಿಸೋಕೆ ಮುಂದಾಗಿದೆ. ಈ ನಡುವೆ ಅಸಲಿಗೆ ಕಾರಿನ ಈ ಸ್ಥಿತಿಗೆ ಕಾರಣ, ಚಾಲಕನಿಗೆ ಈ ಹೈ ಎಂಡ್ ಕಾರಿನ್ನ ಚಾಲನೆ ಮಾಡಿರುವ ಅನುಭವವೇ ಇರಲಿಲ್ಲ. ಅತ್ಯಾಧುನಿಕ ತಂತ್ರಜ್ಞಾನದ ಕಾರನ್ನು ಚಾಲನೆ ಮಾಡಿದ ಅನನುಭವಿ ಚಾಲಕನೇ ಈ ಅವಾಂತರಕ್ಕೆ ಕಾರಣ ಅನ್ನೋದೀಗ ಬಯಲಾಗಿದೆ.