ಬೆಂಗಳೂರು: ಇತ್ತೀಚೆಗೆ ಫೋನ್ ಪೇ, ಗೂಗಲ್ ಪೇ ಸೇರಿ ಹಲವು ಪ್ಲಾಟ್ ಫಾರ್ಮ್ ಗಳ ಮೂಲಕ ಯುಪಿಐ ಪೇಮೆಂಟ್ ಮಾಡಲು ಕಷ್ಟವಾಗುತ್ತಿದೆ. ಸರ್ವರ್ ಸಮಸ್ಯೆ ಸೇರಿ ಹಲವು ತಾಂತ್ರಿಕ ಕಾರಣಗಳಿಂದಾಗಿ ಯುಪಿಐ ಪೇಮೆಂಟ್ ಗೆ ಅಡಚಣೆಯಾಗುತ್ತಿದೆ. ಇದನ್ನು ತಡೆಯಬೇಕು ಎಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು (ಎನ್ ಪಿ ಸಿ ಐ) ಹೊಸ ಕ್ರಮ ಜಾರಿಗೆ ತರುತ್ತಿದೆ. ಇನ್ನುಮುಂದೆ ಬ್ಯಾಂಕುಗಳು ಕೇವಲ 15 ಸೆಕೆಂಡ್ ಗಳಲ್ಲಿ ಯುಪಿಐ ಪೇಮೆಂಟ್ ಮುಗಿಯಬೇಕು ಎಂದು ಎನ್ ಪಿ ಸಿ ಐ ಸುತ್ತೋಲೆ ಹೊರಡಿಸಿದೆ.
ಕ್ರೆಡಿಟ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ಪೇಮೆಂಟ್ ಸಮಯವನ್ನೂ 15 ಸೆಕೆಂಡುಗಳಿಗೆ ಇಳಿಕೆ ಮಾಡಲಾಗಿದೆ. ಎನ್ ಪಿ ಸಿ ಐ ಹೊರಡಿಸಿದ ಸುತ್ತೋಲೆಯ ಪ್ರಕಾರ, ವಿನಂತಿ ಪಾವತಿ, ಪ್ರತಿಕ್ರಿಯೆ ಪಾವತಿ (ಡೆಬಿಟ್ ಮತ್ತು ಕ್ರೆಡಿಟ್ ಅನ್ನು ಒಳಗೊಂಡಂತೆ) ಮತ್ತು ವಹಿವಾಟು ಸ್ಥಿತಿಯನ್ನು ಪರಿಶೀಲಿಸಿದಂತಹ ಸಾಮಾನ್ಯವಾಗಿ ಬಳಸುವ ಯುಪಿಐ ಆ್ಯಪ್ ಗಳ ಪ್ರತಿಕ್ರಿಯೆ ಸಮಯವನ್ನು ಕ್ರಮವಾಗಿ 30 ಸೆಕೆಂಡುಗಳಿಂದ 15 ಸೆಕೆಂಡುಗಳು ಮತ್ತು 10 ಸೆಕೆಂಡುಗಳಿಗೆ ಇಳಿಸಲಾಗಿದೆ.
ಜೂನ್ 16ರಿಂದ ಹೊಸ ನಿಯಮಗಳು ಜಾರಿಗೆ ಬರಲಿವೆ. ಹೊಸ ಬದಲಾವಣೆಗಳು ಹಾಗೂ ನಿಯಮಗಳು ಪಾವತಿದಾರರ ಬ್ಯಾಂಕುಗಳು, ಫಲಾನುಭವಿ ಬ್ಯಾಂಕುಗಳು ಮತ್ತು ಫೋನ್ ಪೇ ಮತ್ತು ಪೇಟಿಎಂನಂತಹ ಪಾವತಿ ಸೇವಾ ಪೂರೈಕೆದಾರರಿಗೆ ಅನ್ವಯಿಸುತ್ತವೆ. ಎನ್ ಪಿ ಸಿ ಐ, ಪರಿಷ್ಕರಣೆಗಳು ಗ್ರಾಹಕರ ಅನುಭವವನ್ನು ಸುಧಾರಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದೆ ಮತ್ತು ಎಲ್ಲಾ ಸದಸ್ಯ ಬ್ಯಾಂಕುಗಳು ತಮ್ಮ ವ್ಯವಸ್ಥೆಗಳನ್ನು ಅದಕ್ಕೆ ಅನುಗುಣವಾಗಿ ನವೀಕರಿಸಲಾಗಿದೆಯೆ ಎಂದು ಖಚಿತಪಡಿಸಿಕೊಳ್ಳಲು ನಿರ್ದೇಶನ ನೀಡಿದೆ ಎಂದು ತಿಳಿದುಬಂದಿದೆ.
ಕಳೆದ ಕೆಲವು ತಿಂಗಳಿಂದ ಯುಪಿಐ ಪೇಮೆಂಟ್ ಗೆ ಭಾರಿ ಸರ್ವರ್ ಸಮಸ್ಯೆ ಕಾಡುತ್ತಿದೆ. ಬ್ಯಾಂಕುಗಳ ಪೇಮೆಂಟ್ ಪ್ರಕ್ರಿಯೆ ಮುಗಿಸುವ ವೇಳೆಯೂ ಜಾಸ್ತಿ ಇರುವ ಕಾರಣ ಸಮಸ್ಯೆಯಾಗಿತ್ತು. ಈಗ ಎನ್ ಪಿ ಸಿ ಐ ಹೊಸ ಆದೇಶದ ಮೂಲಕ ಪೇಮೆಂಟ್ ಸಮಯವನ್ನು ಕಡಿತಗೊಳಿಸಿದೆ.