ಬೀದರ್: ಮಂಗಳೂರಿನಲ್ಲಿ ಕೇರಳ ಮೂಲದ ಯುವಕನ ಕೊಲೆ ವಿಚಾರವಾಗಿ ನಗರದಲ್ಲಿ ಸ್ಪೀಕರ್ ಯು.ಟಿ. ಖಾದರ್ ಪ್ರತಿಕ್ರಿಯಿಸಿದ್ದಾರೆ.
ಅನಗತ್ಯವಾಗಿ ಮಾಹಿತಿ, ಪೂರಕ ದಾಖಲೆ ಇಲ್ಲದೇ ಜನರಲ್ಲಿ ಇಲ್ಲಸಲ್ಲದ ಸಂಶಯ ಹುಟ್ಟಿಸ ಬಾರದು. ಗುಂಪು ಸೇರಿ ಹಲ್ಲೆ ಮಾಡಿ ಕೊಲೆ ಮಾಡಿದ್ದು ಸರಿನಾ? ತಪ್ಪಾ? ಅದರ ಬಗ್ಗೆ ಚರ್ಚೆ ಆಗಬೇಕಲ್ಲ. ನಾಳೆ ಇದೇ ರೀತಿ ಹಲ್ಲೆ ಮಾಡಲು ಪ್ರೇರಣೆ ಆಗಬೇಕಾ? ತಪ್ಪಾದರೆ ಪಾಪ ಆ ಮಕ್ಕಳದ್ದು ಮಾತ್ರ ತಪ್ಪಲ್ಲ. ಅವರಲ್ಲಿ ಅಂತಹ ವಿಷ ತುಂಬುತ್ತಾರಲ್ಲ ಅವರದ್ದೂ ತಪ್ಪು ಎಂದಿದ್ದಾರೆ.
ಯುವಕರು, ವಿದ್ಯಾರ್ಥಿಗಳನ್ನ ಸತ್ಪ್ರಜೆಯಾಗಿ ನಿಲ್ಲಿಸಬೇಕು. ಇದನ್ನ ಪ್ರತಿ ವರ್ಗ, ಸಮಾಜ, ಪ್ರದೇಶದ ಜನರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಯುವಕರು ಸಮಾಜದಲ್ಲಿ ಸತ್ಪ್ರಜೆಯಾಗಲು ಬೇಕಾದ ಎಲ್ಲ ಪೂರಕ ವಾತಾವರಣವನ್ನು ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.
ಈ ಘಟನೆ ಮಂಗಳೂರಿಗಷ್ಟೇ ಅಲ್ಲ ಇಡೀ ದೇಶಕ್ಕೆ ದೊಡ್ಡದಾದ ಕಪ್ಪು ಚುಕ್ಕೆ ಎಂದು ಯು.ಟಿ.ಖಾದರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.



















