ದಾವಣಗೆರೆ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ತೋಟಕ್ಕೆ ನುಗ್ಗಿ ಸುಮಾರು 1,200ಕ್ಕೂ ಅಧಿಕ ಅಡಿಕೆ ಮರಗಳನ್ನು ಧರೆಗೆ ಉರುಳಿಸಿರುವ ಘಟನೆ ಜಿಲ್ಲೆಯ ಅಣಬೇರು ಗ್ರಾಮದಲ್ಲಿ ನಡೆದಿದೆ.
ಪುಷ್ಪವತಿ ಎಂಬ ಮಹಿಳೆಗೆ ಸೇರಿದ ತೋಟಕ್ಕೆ ನುಗ್ಗಿ ಅಡಿಕೆ ಮರ ನಾಶ ಮಾಡಿದ್ದಾರೆ ಎನ್ನಲಾಗಿದೆ. ಪುಷ್ಪವತಿ ಎರಡೂವರೆ ಎಕರೆ ಜಮೀನಿನಲ್ಲಿ ಅಡಕೆ ಮರಗಳನ್ನು ಬೆಳೆಸಿದ್ದರು.
ಕಳೆದ ಹಲವಾರು ವರ್ಷಗಳಿಂದ ಸಂಬಂಧಿಗಳ ನಡುವೆ ಜಮೀನಿನ ವಿಚಾರವಾಗಿ ಜಗಳ ಆಗುತ್ತಿತ್ತು ಎನ್ನಲಾಗಿದೆ. ಸರ್ವೇ ಮಾಡಿಸಿದಾಗ ಪುಷ್ಪವತಿ ಹೆಚ್ಚುವರಿ ಭೂಮಿ ಪಡೆದಿದ್ದರು ಎನ್ನಲಾಗಿದೆ. ನನ್ನ ಜಮೀನಿನಲ್ಲಿ ಬಿಡುವುದಿಲ್ಲ. ಪಕ್ಕದ ಜಮೀನಿನಲ್ಲಿ ಹೆಚ್ಚುವರಿ ತೆಗೆದುಕೋ ಎಂದು ಪುಷ್ಪವತಿ ಹೇಳಿದಾಗ ರಾತ್ರಿ ಸಮಯದಲ್ಲಿ ಟ್ರ್ಯಾಕ್ಟರ್ ಬಳಸಿ ಸಂಬಂಧಿಕರು ಅಡಕೆ ತೋಟ ನಾಶ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಯಲ್ಲಮ್ಮ ಹಾಗೂ ಮಹೇಶ್ ಎಂಬುವರು ಈ ಕೃತ್ಯ ಎಸಗಿದ್ದಾರೆಂದು ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.