2025 ರ ಐಪಿಎಲ್ ಮೆಗಾ ಹರಾಜಿಗೆ ಈಗಾಗಲೇ ವೇದಿಕೆ ಸಿದ್ಧವಾಗಿದ್ದು, ನವೆಂಬರ್ 24 ಮತ್ತು 25 ರಂದು ಬಿಡ್ಡಿಂಗ್ ನಡೆಯಲಿದೆ. ಈ ಮಧ್ಯೆ ಬಿಸಿಸಿಐ ಐಪಿಎಲ್ ವೇಳಾಪಟ್ಟಿ ಪ್ರಕಟಿಸಿದೆ ಎಂದು ವರದಿಯಾಗಿದೆ.
ಅಲ್ಲದೇ, ಮುಂದಿನ ಮೂರು ಆವೃತ್ತಿಯ ವೇಳಾಪಟ್ಟಿಯನ್ನು ಕೂಡ ಬಿಸಿಸಿಐ ಪ್ರಕಟಿಸಿದೆ. ಮುಂದಿನ ಐಪಿಎಲ್ ಮಾರ್ಚ್ 14 ರಿಂದ ಆರಂಭವಾಗಲಿದ್ದು, ಮೇ 25 ರವರೆಗೆ ನಡೆಯಲಿದೆ. ಅಲ್ಲದೇ, 2026 ರಲ್ಲಿ ನಡೆಯಲ್ಲಿರುವ ಐಪಿಎಲ್ ಮಾರ್ಚ್ 15 ರಿಂದ ಮೇ 31 ರವರೆಗೆ ನಡೆದರೆ, 2027 ರ ಐಪಿಎಲ್ ಮಾರ್ಚ್ 14 ರಿಂದ ಮೇ 30 ರ ವರೆಗೆ ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ ಎಂದು ವರದಿಯಾಗಿದೆ.
ಇಎಸ್ಪಿಎನ್ ಕ್ರಿಕ್ಇನ್ಫೋ ವರದಿ ಮಾಡಿರುವಂತೆ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಎಲ್ಲಾ ಫ್ರಾಂಚೈಸಿಗಳಿಗೂ ಬಿಸಿಸಿಐ, ಇ-ಮೇಲ್ ಮುಖಾಂತರ ಈ ಮಾಹಿತಿ ಕಳುಹಿಸಲಾಗಿದೆ. ಈ ಮೂರರ ಪೈಕಿ, ಮುಂದಿನ ವರ್ಷ ನಡೆಯಲಿರುವ ಐಪಿಎಲ್ ನ ಸಂಪೂರ್ಣ ವೇಳಾಪಟ್ಟಿ ಸದ್ಯದಲ್ಲೇ ಹೊರಬೀಳುವ ಸಾಧ್ಯತೆ ಇದೆ. ಮುಂದಿನ ಆವೃತ್ತಿಯಲ್ಲೂ 74 ಪಂದ್ಯಗಳು ನಡೆಯಲಿವೆ ಎನ್ನಲಾಗಿದೆ.
ಈ ಬಾರಿ ಚಾಂಪಿಯನ್ಸ್ ಟ್ರೋಫಿ ಮುಗಿದ ತಕ್ಷಣ ಟೂರ್ನಿ ಆರಂಭವಾಗಲಿದೆ. ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನದಲ್ಲಿ ಫೆಬ್ರವರಿ 19 ರಿಂದ ಮಾರ್ಚ್ 9 ರವರೆಗೆ ನಡೆಯಲಿದೆ. ಸದ್ಯ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ ಸರಣಿಯಾಡುತ್ತಿದೆ.