ಢಾಕಾ: ಬಾಂಗ್ಲಾದೇಶದ ದಂಗೆಯ ನಾಯಕ ಷರೀಫ್ ಒಸ್ಮಾನ್ ಹಾದಿ ಹತ್ಯೆಯ ಬಳಿಕ ಆರಂಭವಾದ ಹಿಂಸಾಚಾರ ಮಿತಿಮೀರಿದ್ದು, ಶನಿವಾರ ನಡೆದ ಅಮಾನುಷ ಘಟನೆಯೊಂದರಲ್ಲಿ ಮಾಜಿ ಪ್ರಧಾನಿ ಶೇಖ್ ಹಸೀನಾ ನೇತೃತ್ವದ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (BNP) ನಾಯಕರೊಬ್ಬರ ಮನೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಈ ದುರಂತದಲ್ಲಿ ಬಿಎನ್‌ಪಿ ನಾಯಕನ 7 ವರ್ಷದ ಪುತ್ರಿ ಸಜೀವ ದಹನವಾಗಿದ್ದು, ಕುಟುಂಬದ ಇತರ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಲಕ್ಷ್ಮೀಪುರ ಸದರ್ ಉಪಜಿಲ್ಲೆಯ ಭವಾನಿಗಂಜ್ ಒಕ್ಕೂಟದ ಬಿಎನ್‌ಪಿ ನಾಯಕ ಹಾಗೂ ಉದ್ಯಮಿ ಬಿಲಾಲ್ ಹೊಸೈನ್ ಅವರ ನಿವಾಸದ ಮೇಲೆ ಶನಿವಾರ ನಸುಕಿನ ಜಾವ ಈ ದಾಳಿ ನಡೆದಿದೆ. ದುಷ್ಕರ್ಮಿಗಳು ಮನೆಯ ಹೊರಗಿನಿಂದ ಬಾಗಿಲು ಲಾಕ್ ಮಾಡಿ, ನಂತರ ಪೆಟ್ರೋಲ್ ಸುರಿದು ಮನೆಗೆ ಬೆಂಕಿ ಹಚ್ಚಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಬಾಲಕಿಯ ದಾರುಣ ಸಾವು
ಘಟನೆಯಲ್ಲಿ ಬಿಲಾಲ್ ಅವರ 7 ವರ್ಷದ ಪುತ್ರಿ ಆಯೇಷಾ ಅಖ್ತರ್ ಮನೆಯೊಳಗೆ ಸಿಲುಕಿ ಬೆಂಕಿಗೆ ಆಹುತಿಯಾಗಿದ್ದಾಳೆ. ಬಿಲಾಲ್ ಹೊಸೈನ್ ಹಾಗೂ ಅವರ ಇಬ್ಬರು ಹಿರಿಯ ಪುತ್ರಿಯರಾದ ಸಲ್ಮಾ ಅಖ್ತರ್ (16) ಮತ್ತು ಸಮಿಯಾ ಅಖ್ತರ್ (14) ಗಂಭೀರವಾಗಿ ಗಾಯಗೊಂಡಿದ್ದಾರೆ. ವೈದ್ಯರ ಪ್ರಕಾರ, ಗಾಯಾಳುಗಳ ದೇಹದ ಶೇ. 50ರಿಂದ 60ರಷ್ಟು ಭಾಗ ಸುಟ್ಟುಹೋಗಿದ್ದು, ಇಬ್ಬರು ಬಾಲಕಿಯರ ಸ್ಥಿತಿ ಚಿಂತಾಜನಕವಾಗಿದೆ. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಢಾಕಾದ ‘ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬರ್ನ್ ಅಂಡ್ ಪ್ಲಾಸ್ಟಿಕ್ ಸರ್ಜರಿ’ಗೆ ರವಾನಿಸಲಾಗಿದೆ.
ಕುಟುಂಬಸ್ಥರ ಆಕ್ರಂದನ
ಘಟನೆಯ ಬಗ್ಗೆ ಬಿಲಾಲ್ ಅವರ ತಾಯಿ ಹಜೇರಾ ಬೇಗಂ ಎಳೆಎಳೆಯಾಗಿ ಮಾಹಿತಿ ನೀಡಿದ್ದಾರೆ. “ರಾತ್ರಿ ಊಟ ಮುಗಿಸಿ ಮಲಗಿದ್ದೆವು. ಸುಮಾರು 1 ಗಂಟೆಯ ಹೊತ್ತಿಗೆ ಮಗನ ಶೀಟ್ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿತು. ನಾನು ಕಿರುಚುತ್ತಾ ಹೊರಬಂದೆ, ಆದರೆ ಮನೆಯ ಬಾಗಿಲುಗಳನ್ನು ಹೊರಗಿನಿಂದ ಲಾಕ್ ಮಾಡಲಾಗಿತ್ತು. ಅಂತಿಮವಾಗಿ ನನ್ನ ಮಗ ಬಾಗಿಲು ಮುರಿದು, ಪತ್ನಿ ಮತ್ತು ಇಬ್ಬರು ಸಣ್ಣ ಮಕ್ಕಳೊಂದಿಗೆ (4 ತಿಂಗಳ ಮಗು ಹಾಗೂ 6 ವರ್ಷದ ಮಗ) ಹೊರಬಂದರು. ಆದರೆ ಕೋಣೆಯಲ್ಲಿ ಮಲಗಿದ್ದ ಮೂವರು ಹೆಣ್ಣುಮಕ್ಕಳ ಪೈಕಿ ಕಿರಿಯವಳನ್ನು ಉಳಿಸಲು ಸಾಧ್ಯವಾಗಲಿಲ್ಲ,” ಎಂದು ಅವರು ಕಣ್ಣೀರು ಹಾಕಿದ್ದಾರೆ.
ತನಿಖೆ ಚುರುಕು
ಲಕ್ಷ್ಮೀಪುರ ಸದರ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕೃತ್ಯದ ಹಿಂದಿನ ಉದ್ದೇಶ ಮತ್ತು ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಮುಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರದ ಅವಧಿಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಹಿಂಸಾಚಾರ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ವರದಿಗಳು ತಿಳಿಸಿವೆ.
ಇದನ್ನೂ ಓದಿ: ದಕ್ಷಿಣ ಆಫ್ರಿಕಾದಲ್ಲಿ ರಕ್ತಪಾತ : ಬೀದಿಯಲ್ಲಿ ಮನಬಂದಂತೆ ಗುಂಡಿನ ದಾಳಿ, 10 ಜನರ ಹತ್ಯೆ



















