ಬಳ್ಳಾರಿ : ಜಿಲ್ಲೆಯಲ್ಲಿ ಸಂಚಲನ ಮೂಡಿಸಿರುವ ಅಕ್ರಮ ಪಡಿತರ ಅಕ್ಕಿ ಸಾಗಾಣೆ ಪ್ರಕರಣದಲ್ಲಿ ಬಳ್ಳಾರಿ ಜಿಲ್ಲಾ ಎಸ್ಪಿ ಸುಮನ್ ಡಿ. ಪನ್ನೇಕರ್ ಅವರ ಗನ್‌ಮ್ಯಾನ್ ದೇವರಾಜ್ ಬಂಧನಕ್ಕೊಳಗಾಗಿದ್ದಾನೆ. ಅಕ್ರಮ ಪಡಿತರ ಅಕ್ಕಿ ಸಾಗಾಣೆದಾರರಿಂದ ಹಣ ವಸೂಲಿ ಮಾಡಿದ ಆರೋಪದ ಮೇಲೆ ಪೊಲೀಸರು ಕ್ರಮ ಕೈಗೊಂಡಿದ್ದು, ಈ ಪ್ರಕರಣ ಈಗ ಪೊಲೀಸ್ ಇಲಾಖೆಯಲ್ಲೇ ಭಾರೀ ಚರ್ಚೆಗೆ ಕಾರಣವಾಗಿದೆ.
ಶರಭಯ್ಯ ಎನ್ನುವ ಅಕ್ಕಿ ಸಾಗಾಣೆದಾರರಿಂದ 3 ಲಕ್ಷ ರೂಪಾಯಿ ಹಣ ವಸೂಲಿ ಮಾಡಿರುವ ಆರೋಪ ಗನ್‌ಮ್ಯಾನ್ ದೇವರಾಜ್ ಮೇಲೆ ಕೇಳಿಬಂದಿದೆ. ಆಂಧ್ರಪ್ರದೇಶಕ್ಕೆ ಪಡಿತರ ಅಕ್ಕಿ ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಅಡ್ಡಗಟ್ಟಿ, ತಾವು “ಎಸ್ಪಿ ಸ್ಕ್ವಾಡ್” ಎಂದು ಹೇಳಿಕೊಂಡು ದೇವರಾಜ್ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಆರಂಭದಲ್ಲಿ 5 ಲಕ್ಷ ರೂಪಾಯಿ ಕೇಳಿ, ಬಳಿಕ 3 ಲಕ್ಷ ಪಡೆದುಕೊಂಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಣ ನೀಡದಿದ್ದರೆ ಲಾರಿಗಳನ್ನು ಸೀಜ್ ಮಾಡಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಲಾಗಿತ್ತು ಎಂದು ಶರಭಯ್ಯ ಆರೋಪಿಸಿದ್ದಾರೆ. ಈ ಹಿನ್ನೆಲೆ ಅವರು ಮೋಕಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದರು. ತನಿಖೆ ವೇಳೆ ದೇವರಾಜ್ ಹಾಗೂ ಆತನ ಸಹಚರರು ಹಣ ವಸೂಲಿ ಮಾಡಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಎಸ್ಪಿ ಗನ್‌ಮ್ಯಾನ್ ದೇವರಾಜ್ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಎಸ್ಪಿ ಸುಮನ್ ಪನ್ನೇಕರ್ ನೇತೃತ್ವದಲ್ಲಿ ಕ್ರಮ :
ಪ್ರಕರಣದ ಗಂಭೀರತೆಯನ್ನು ಗಮನಿಸಿದ ಎಸ್ಪಿ ಸುಮನ್ ಡಿ. ಪೆನ್ನೇಕರ್, ಸ್ವತಃ ಕ್ರಮ ಕೈಗೊಂಡಿದ್ದಾರೆ. ಗನ್‌ಮ್ಯಾನ್ ದೇವರಾಜ್ ಬಂಧನಕ್ಕೊಳಗಾಗಿದ್ದು, ಮೋಕಾ ಪೊಲೀಸ್ ಠಾಣೆಯಲ್ಲಿ ವಿಚಾರಣೆ ನಡೆಯುತ್ತಿದೆ ಇಲಾಖೆಯ ಗೌರವಕ್ಕೆ ಧಕ್ಕೆ ತರುವ ರೀತಿಯ ವರ್ತನೆ ಸಹಿಸಲಾಗುವುದಿಲ್ಲ ಎಂಬ ಸಂದೇಶವನ್ನು ಎಸ್‌ಪಿ ನೀಡಿದ್ದಾರೆ.
ಸದ್ಯ ಬಳ್ಳಾರಿ ಜಿಲ್ಲೆಯಲ್ಲಿ ಅಕ್ರಮ ಪಡಿತರ ಅಕ್ಕಿ ದಂಧೆ ವಿರುದ್ಧ ಪೊಲೀಸರು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈಗಾಗಲೇ ನೂರಾರು ಪ್ರಕರಣಗಳು ದಾಖಲಾಗಿದ್ದು, ಅಕ್ರಮ ಸಾಗಾಣೆ ತಡೆಗೆ ವಿಶೇಷ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಇದೇ ನಡುವೆ ಪೊಲೀಸ್ ಸಿಬ್ಬಂದಿಯೇ ಹಣ ವಸೂಲಿ ಆರೋಪದಲ್ಲಿ ಸಿಲುಕಿರುವುದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ : ದಾವಣಗೆರೆಯಲ್ಲಿ ಸರ್ಕಾರಿ ಬಸ್ ಪಲ್ಟಿ ; 20ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ!


















