ವಾಷಿಂಗ್ಟನ್: ಎಚ್-1ಬಿ ವೀಸಾ ನೀತಿಯಲ್ಲಿನ ಗೊಂದಲಗಳಿಗೆ ತೆರೆ ಎಳೆದಿರುವ ಶ್ವೇತಭವನವು, 88 ಲಕ್ಷ ರೂ. ಶುಲ್ಕವನ್ನು ಕೇವಲ ಹೊಸ ಅರ್ಜಿದಾರರಿಗೆ ಮಾತ್ರ “ಒಂದು ಬಾರಿಯ ಪಾವತಿ”ಯಾಗಿ ವಿಧಿಸಲಾಗುವುದು ಎಂದು ಸ್ಪಷ್ಟಪಡಿಸಿದೆ. ಈ ಮೊದಲು ವಾರ್ಷಿಕವಾಗಿ ಈ ಶುಲ್ಕವನ್ನು ಹೊಸ ಮತ್ತು ನವೀಕರಣಗೊಳ್ಳುವ ವೀಸಾಗಳಿಗೆ ವಿಧಿಸಲಾಗುವುದು ಎಂಬ ಹೇಳಿಕೆ ಟೆಕ್ ಉದ್ಯಮದಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು.
ಶುಕ್ರವಾರ ಅಮೆರಿಕದ ವಾಣಿಜ್ಯ ಸಚಿವರಾದ ಹೋವರ್ಡ್ ಲುಟ್ನಿಕ್ ಅವರು, ಈ ಬೃಹತ್ ಶುಲ್ಕವನ್ನು ವಾರ್ಷಿಕವಾಗಿ ಪಾವತಿಸಬೇಕಾಗುತ್ತದೆ ಮತ್ತು ಇದು ಹೊಸ ವೀಸಾ ಹಾಗೂ ನವೀಕರಣಗಳೆರಡಕ್ಕೂ ಅನ್ವಯಿಸುತ್ತದೆ ಎಂದು ಘೋಷಿಸಿದ್ದರು. ಆದರೆ, ಈ ಹೊಸ ನೀತಿ ಜಾರಿಗೆ ಬರುವ ಕೆಲವೇ ಗಂಟೆಗಳ ಮೊದಲು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೊಲಿನ್ ಲೆವಿಟ್ ಅವರು ಸ್ಪಷ್ಟೀಕರಣ ನೀಡಿದ್ದು, “ಇದು ವಾರ್ಷಿಕ ಶುಲ್ಕವಲ್ಲ. ಇದು ಕೇವಲ ಹೊಸ ವೀಸಾಗಳಿಗೆ ಅನ್ವಯಿಸುವ ಒಂದು ಬಾರಿಯ ಶುಲ್ಕವಾಗಿದೆ. ನವೀಕರಣಗಳಿಗೆ ಅಥವಾ ಪ್ರಸ್ತುತ ವೀಸಾ ಹೊಂದಿರುವವರಿಗೆ ಇದು ಅನ್ವಯಿಸುವುದಿಲ್ಲ,” ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದ್ದಾರೆ. ಈಗಾಗಲೇ ಎಚ್-1ಬಿ ವೀಸಾ ಹೊಂದಿರುವವರು ಮತ್ತು ಪ್ರಸ್ತುತ ದೇಶದ ಹೊರಗಿರುವವರು ಮರಳಿ ಪ್ರವೇಶಿಸಲು 100,000 ಡಾಲರ್ ಪಾವತಿಸುವ ಅಗತ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಟೆಕ್ ವಲಯದಲ್ಲಿ ಉಂಟಾಗಿದ್ದ ಗೊಂದಲ
ಶ್ವೇತಭವನದ ಸ್ಪಷ್ಟೀಕರಣಕ್ಕೆ ಮುನ್ನ, ಅಮೆರಿಕದ ಕಂಪನಿಗಳು ತಮ್ಮ ವಿದೇಶಿ ಉದ್ಯೋಗಿಗಳ ಮೇಲಾಗುವ ಪರಿಣಾಮಗಳ ಬಗ್ಗೆ ತಲೆಕೆಡಿಸಿಕೊಂಡಿದ್ದವು. ಹಲವಾರು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ದೇಶ ಬಿಟ್ಟು ಹೋಗದಂತೆ ಹಾಗೂ ಹೋಗಿರುವವರು 24 ಗಂಟೆಗಳ ಒಳಗಾಗಿ ಮರಳುವಂತೆ ಎಚ್ಚರಿಕೆ ನೀಡಿದ್ದವು. ಶುಕ್ರವಾರ ವಿಮಾನ ಹತ್ತಿದ್ದ ಕೆಲವರು, ಅಮೆರಿಕಕ್ಕೆ ಮರುಪ್ರವೇಶಿಸಲು ಸಾಧ್ಯವಾಗದೇ ಇರಬಹುದೆಂಬ ಭಯದಿಂದ ವಿಮಾನದಿಂದ ಕೆಳಗಿಳಿದ ಘಟನೆಗಳೂ ವರದಿಯಾಗಿವೆ. ಜೆಪಿ ಮೋರ್ಗಾನ್ ಬ್ಯಾಂಕ್‌ನಂತಹ ಸಂಸ್ಥೆಗಳು ತಮ್ಮ ಎಚ್-1ಬಿ ವೀಸಾ ಹೊಂದಿರುವ ಉದ್ಯೋಗಿಗಳಿಗೆ ಮುಂದಿನ ಸೂಚನೆ ಬರುವವರೆಗೂ ಅಮೆರಿಕದಲ್ಲೇ ಉಳಿದುಕೊಳ್ಳುವಂತೆ ಮತ್ತು ಅಂತಾರಾಷ್ಟ್ರೀಯ ಪ್ರಯಾಣವನ್ನು ತಪ್ಪಿಸುವಂತೆ ಸೂಚನಾ ಪತ್ರ ರವಾನಿಸಿದ್ದವು.
ಟ್ರಂಪ್ ಆಡಳಿತದ ಸಮರ್ಥನೆ
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಶುಕ್ರವಾರ ವಾಷಿಂಗ್ಟನ್‌ನಲ್ಲಿ ಈ ಬದಲಾವಣೆಯನ್ನು ಘೋಷಿಸಿ, ಇದು ಅಮೆರಿಕದ ಕಾರ್ಮಿಕರನ್ನು ಬೆಂಬಲಿಸಲು ಸಹಕಾರಿ ಎಂದು ವಾದಿಸಿದ್ದರು. “ಎಚ್-1ಬಿ ಕಾರ್ಯಕ್ರಮವನ್ನು ಅಮೆರಿಕದ ಕಾರ್ಮಿಕರ ಬದಲಿಗೆ ಕಡಿಮೆ ಸಂಬಳದ, ಕಡಿಮೆ ಕೌಶಲ್ಯದ ಕಾರ್ಮಿಕರನ್ನು ನೇಮಿಸಿಕೊಳ್ಳಲು ಬಳಸಲಾಗುತ್ತಿದೆ,” ಎಂದು ಕಾರ್ಯಕಾರಿ ಆದೇಶದಲ್ಲಿ ಹೇಳಲಾಗಿತ್ತು. ಇದರ ಜೊತೆಗೆ, ಟ್ರಂಪ್ ಅವರು 1 ಮಿಲಿಯನ್ ಡಾಲರ್ “ಗೋಲ್ಡ್ ಕಾರ್ಡ್” ರೆಸಿಡೆನ್ಸಿ ಕಾರ್ಯಕ್ರಮವನ್ನೂ ಪರಿಚಯಿಸಿದ್ದರು. ಈ ಆದೇಶಕ್ಕೆ ಸಹಿ ಹಾಕುವಾಗ ಮಾತನಾಡಿದ್ದ ಲುಟ್ನಿಕ್, “ಒಬ್ಬ ವ್ಯಕ್ತಿಗೆ ವರ್ಷಕ್ಕೆ 88 ಲಕ್ಷ ರೂ. ಪಾವತಿಸಬೇಕೇ ಅಥವಾ ಅವರನ್ನು ಮನೆಗೆ ಕಳುಹಿಸಿ ಅಮೆರಿಕನ್ನರನ್ನು ನೇಮಿಸಿಕೊಳ್ಳಬೇಕೇ ಎಂಬುದನ್ನು ಕಂಪನಿಗಳು ನಿರ್ಧರಿಸಬೇಕು,” ಎಂದು ಹೇಳಿದ್ದರು.
ಭಾರತದ ಕಳವಳ
ಎಚ್-1ಬಿ ವೀಸಾಗಳು ಅಮೆರಿಕದ ಕಂಪನಿಗಳಿಗೆ ವಿಜ್ಞಾನಿಗಳು, ಎಂಜಿನಿಯರ್‌ಗಳು ಮತ್ತು ಕಂಪ್ಯೂಟರ್ ಪ್ರೋಗ್ರಾಮರ್‌ಗಳಂತಹ ವಿಶೇಷ ಕೌಶಲ್ಯ ಹೊಂದಿರುವ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತವೆ. ಈ ವೀಸಾಗಳನ್ನು ಟೆಕ್ ಉದ್ಯಮ ವ್ಯಾಪಕವಾಗಿ ಬಳಸಿಕೊಳ್ಳುತ್ತಿದ್ದು, ಪ್ರತಿ ವರ್ಷ ಲಾಟರಿ ವ್ಯವಸ್ಥೆಯ ಮೂಲಕ ಹಂಚಿಕೆಯಾಗುವ ಪರವಾನಗಿಗಳಲ್ಲಿ ಸುಮಾರು ಮುಕ್ಕಾಲು ಭಾಗದಷ್ಟು ಭಾರತೀಯರಿಗೆ ದೊರೆಯುತ್ತದೆ. ಆದರೆ ಟ್ರಂಪ್ ಘೋಷಿಸಿರುವ ಹೊಸ ನೀತಿಯು “ಹಲವು ಕುಟುಂಬಗಳಿಗೆ ತೊಂದರೆ ಉಂಟುಮಾಡಬಹುದು” ಎಂದು ಭಾರತದ ವಿದೇಶಾಂಗ ಸಚಿವಾಲಯವು ಕಳವಳ ವ್ಯಕ್ತಪಡಿಸಿದೆ. ಕೌಶಲ್ಯಯುತ ಪ್ರತಿಭೆಗಳ ಚಲನಶೀಲತೆಯು ಎರಡೂ ದೇಶಗಳಲ್ಲಿ “ನಾವೀನ್ಯತೆ” ಮತ್ತು “ಸಂಪತ್ತು ಸೃಷ್ಟಿಗೆ” ಕೊಡುಗೆ ನೀಡಿದೆ ಎಂದೂ ಹೇಳಿದೆ. ಎಲಾನ್ ಮಸ್ಕ್ ಸೇರಿದಂತೆ ಹಲವು ಟೆಕ್ ಉದ್ಯಮಿಗಳು ಈ ಕ್ರಮವನ್ನು ವಿರೋಧಿಸಿದ್ದು, ಪ್ರಮುಖ ತಂತ್ರಜ್ಞಾನ ವಲಯದ ಹುದ್ದೆಗಳನ್ನು ತುಂಬಲು ಅಮೆರಿಕದಲ್ಲಿ ಸಾಕಷ್ಟು ಸ್ಥಳೀಯ ಪ್ರತಿಭೆಗಳಿಲ್ಲ ಎಂದು ಎಚ್ಚರಿಸಿದ್ದಾರೆ.



















