ಹುಬ್ಬಳ್ಳಿ: ಎರಡೂ ಕ್ಷೇತ್ರಗಳ ಉಪಚುನಾವಣೆಯಲ್ಲಿ ನಾವೇ ಗೆಲ್ಲುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದ ವಿಮಾನ ನಿಲ್ದಾಣದಲ್ಲಿಂದು ಮಾತನಾಡಿದ ಅವರು, ಕೇಂದ್ರ ಸರ್ಕಾರ ಪೆಟ್ರೋಲ್ ಸೇರಿದಂತೆ ಎಲ್‌ಪಿಜಿ ದರ ಹೆಚ್ಚಳ ಮಾಡಿದ್ದು, ಇದರಿಂದಾಗಿ ಜನ ಭ್ರಮನಿರಸನಗೊಂಡಿದ್ದಾರೆ. ಹೀಗಾಗಿ ನಮ್ಮ ಗ್ಯಾರಂಟಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಉಪಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಗೆಲ್ಲುವುದು ಖಚಿತ ಎಂದು ಹೇಳಿದರು.
ಆಟೋ ಚಾಲಕರು ಗ್ಯಾಸ್ ಬಿಟ್ಟು ಪೆಟ್ರೋಲ್ ಬಳಸಿ ಎಂಬ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಇರಾನ್‌ನಿಂದ ಎರಡು ಎಲ್‌ಪಿಜಿ ಹಡಗುಗಳು ಭಾರತಕ್ಕೆ ಬಂದಿರುವುದನ್ನು ಗುಜರಾತ್‌ಗೆ ಏಕೆ ಕಳುಹಿಸಿದರು?. ಮಂಗಳೂರು, ಕೇರಳಕ್ಕೆ ಕಳುಹಿಸುವ ಮೂಲಕ ರಾಜ್ಯದ ಹಿತಕ್ಕೆ ಸಹಾಯ ಮಾಡಬಹುದಿತ್ತಲ್ಲ? ಕೇಂದ್ರ ಉತ್ತರ ಭಾರತವನ್ನು ಮಾತ್ರ ನೋಡುತ್ತಿದೆ. ಅವರು ದಕ್ಷಿಣ ಭಾರತವನ್ನು ನೋಡುತ್ತಿಲ್ಲ ಎಂದು ಟೀಕಿಸಿದರು.
ಅಧಿಕಾರ ಹಸ್ತಾಂತರ ಹಾಗೂ ನಾಯಕತ್ವ ಬದಲಾವಣೆ ವಿಚಾರದಲ್ಲಿ ಬೇರೆಯವರ ಮಾತಿಗೆ ಬೆಲೆ ಇಲ್ಲ. ಏನೇ ಇದ್ದರೂ ನಾನು ಹಾಗೂ ಮುಖ್ಯಮಂತ್ರಿಯವರು ಹೇಳಬೇಕಾಗುತ್ತದೆ. ಯಾರದೋ ಹೇಳಿಕೆಗೆ ಉತ್ತರ ಕೊಡಲ್ಲ ಎಂದು ಸಚಿವ ಜಮೀರ್ ಅಹ್ಮದ್ ಹೇಳಿಕೆಗೆ ಇದೇ ವೇಳೆ ಟಾಂಗ್ ಕೊಟ್ಟರು.
ಇದನ್ನೂ ಓದಿ : ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ – ರೇಸ್‌ನಲ್ಲಿ ಟಿ20 ವಿಶ್ವಕಪ್ ಹೀರೋಗಳಾದ ಸಂಜು, ಬುಮ್ರಾ!



















