ನಾಗ್ಪುರ: ರಾಜಕೀಯ ಮತ್ತು ವಿವಿಧ ಸಾಮಾಜಿಕ ಕ್ಷೇತ್ರಗಳ ತಲೆಮಾರುಗಳ ಬದಲಾವಣೆಯ ಕುರಿತು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ನೀಡಿರುವ ಹೇಳಿಕೆಯು ಈಗ ಭಾರೀ ಚರ್ಚೆಗೆ ಕಾರಣವಾಗಿದೆ. ಹಳೆಯ ತಲೆಮಾರಿನ ನಾಯಕರು ಹಂತಹಂತವಾಗಿ ನಿವೃತ್ತಿ ಹೊಂದಿ, ಹೊಸ ತಲೆಮಾರಿಗೆ ಜವಾಬ್ದಾರಿಯನ್ನು ಹಸ್ತಾಂತರಿಸಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ.
ನಾಗ್ಪುರದಲ್ಲಿ ಆಯೋಜಿಸಲಾಗಿದ್ದ ‘ಅಡ್ವಾಂಟೇಜ್ ವಿದರ್ಭ-ಖಾಸದಾರ್ ಔದ್ಯೋಗಿಕ ಮಹೋತ್ಸವ್’ಕ್ಕೆ ಸಂಬಂಧಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗಡ್ಕರಿ, “ಯಾವುದೇ ವ್ಯವಸ್ಥೆಯು ಸುಗಮವಾಗಿ ನಡೆಯಲು ಆರಂಭಿಸಿದಾಗ ಹಳೆಯ ತಲೆಮಾರಿನವರು ಬದಿಗೆ ಸರಿದು ಹೊಸಬರಿಗೆ ದಾರಿ ಮಾಡಿಕೊಡಬೇಕು” ಎಂದರು. ಈ ಕಾರ್ಯಕ್ರಮದ ಸಂಘಟಕ ಆಶಿಶ್ ಕಾಳೆ ಅವರು ಯುವ ಪೀಳಿಗೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಂಡಿರುವುದನ್ನು ಶ್ಲಾಘಿಸಿದ ಅವರು, ತಲೆಮಾರುಗಳ ಈ ಬದಲಾವಣೆ ಅಗತ್ಯ ಎಂದು ಒತ್ತಿ ಹೇಳಿದರು.
ಗಡ್ಕರಿ ಅವರ ನಿವೃತ್ತಿಯ ಸುಳಿವು?
ತಮ್ಮ ಆಪ್ತ ಸ್ನೇಹಿತನ ಮಗನಾದ ಆಶಿಶ್ ಕಾಳೆ ಅವರ ಉದಾಹರಣೆ ನೀಡಿದ ಗಡ್ಕರಿ, “ಆಶಿಶ್ ತಂದೆ ನನ್ನ ಸ್ನೇಹಿತರು. ಈಗ ನಾವು ಹಂತಹಂತವಾಗಿ ನಿವೃತ್ತರಾಗಬೇಕು ಮತ್ತು ಹೊಸ ತಲೆಮಾರಿಗೆ ಹೊಣೆಗಾರಿಕೆಯನ್ನು ನೀಡಬೇಕು. ವಾಹನವು ಸರಿಯಾದ ಹಾದಿಯಲ್ಲಿ ಸಾಗಲು ಆರಂಭಿಸಿದಾಗ, ನಾವು ಹಿಂದೆ ಸರಿದು ಬೇರೆ ಯಾವುದಾದರೂ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು” ಎಂದು ಮಾರ್ಮಿಕವಾಗಿ ನುಡಿದರು. 68 ವರ್ಷದ ಗಡ್ಕರಿ ಅವರ ಈ ಮಾತುಗಳು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದ್ದು, ಅವರು ತಮ್ಮ ನಿವೃತ್ತಿಯ ಬಗ್ಗೆ ಸುಳಿವು ನೀಡುತ್ತಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ. ಇದಲ್ಲದೇ, ದೇಶದ ವಿವಿಧ ರಾಜಕೀಯ ಧುರೀಣರಿಗೆ ಅವರು ಇಂಥದ್ದೊಂದ ಸಲಹೆ ನೀಡಿದರೇ ಎಂಬ ಅನುಮಾನವೂ ಹುಟ್ಟಿಕೊಂಡಿದೆ.
ವಿದರ್ಭದ ಕೈಗಾರಿಕಾ ಅಭಿವೃದ್ಧಿಗೆ ಒತ್ತು
ಇದೇ ವೇಳೆ ಫೆಬ್ರವರಿ 6 ರಿಂದ 8 ರವರೆಗೆ ನಾಗ್ಪುರದಲ್ಲಿ ನಡೆಯಲಿರುವ ಈ ಕೈಗಾರಿಕಾ ಮೇಳದ ಕುರಿತು ಮಾತನಾಡಿದ ಅವರು, ವಿದರ್ಭ ಪ್ರದೇಶವನ್ನು ಭಾರತದ ಕೈಗಾರಿಕಾ ಭೂಪಟದಲ್ಲಿ ಪ್ರಬಲ ಬೆಳವಣಿಗೆಯ ಕೇಂದ್ರವನ್ನಾಗಿ ಮಾಡುವುದು ತಮ್ಮ ಗುರಿ ಎಂದು ತಿಳಿಸಿದರು. ಕೃಷಿ, ಸೇವಾ ವಲಯ ಮತ್ತು ಕೈಗಾರಿಕೆಗಳು ಸಮತೋಲನದಲ್ಲಿ ಬೆಳೆದಾಗ ಮಾತ್ರ ಆ ಪ್ರದೇಶದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ಈ ಮೇಳದಲ್ಲಿ ಜವಳಿ, ಐಟಿ, ರಕ್ಷಣಾ ಉತ್ಪಾದನೆ ಮತ್ತು ಸ್ಟಾರ್ಟ್‌ಅಪ್‌ಗಳು ಸೇರಿದಂತೆ ವಿವಿಧ ವಲಯಗಳ ಉದ್ಯಮಿಗಳು ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ RFO ಶವವಾಗಿ ಪತ್ತೆ



















