ಬೆಂಗಳೂರು : ಭಾರತೀಯ ರಾಷ್ಟ್ರೀಯ ಪಾವತಿ ನಿಗಮವು (ಎನ್ ಪಿ ಸಿ ಐ) ಏಕೀಕೃ ಪಾವತಿ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಮಾಡುತ್ತಿದೆ. ಅದರಲ್ಲೂ, ಯುಪಿಐ ಪಾವತಿಯಲ್ಲೀಗ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಜಾರಿಗೊಳಿಸುವ ಮೂಲಕ ಮತ್ತೊಂದು ಕ್ರಾಂತಿಕಾರಕ ತೀರ್ಮಾನವನ್ನು ತೆಗೆದುಕೊಂಡಂತಾಗಿದೆ. ಅಂದರೆ, ಈಗ ಯುಪಿಐ ಪಾವತಿ ಮಾಡುವಾಗ ಪಿನ್ ಕೋಡ್ ಬಳಸಲೇಬೇಕಿಲ್ಲ. ಬಯೋಮೆಟ್ರಿಕ್ ಮೂಲಕವೇ ಈಗ ಪಾವತಿ ಮಾಡಬಹುದಾಗಿದೆ.
ಹೌದು, ಯುಪಿಐ ಆ್ಯಪ್ ಗಳಲ್ಲಿ ಪೇಮೆಂಟ್ ಮಾಡುವಾಗ ಇನ್ನುಮುಂದೆ ಪಿನ್ ಬದಲು ಫಿಂಗರ್ ಪ್ರಿಂಟ್, ಫೇಶಿಯಲ್ ರೆಕಗ್ನಿಶನ್ ಹಾಗೂ ಕಣ್ಣುಗಳ ಚಲನೆ ಮೂಲಕವೇ ಪಾವತಿಯನ್ನು ದೃಢೀಕರಿಸಬಹುದಾಗಿದೆ. ಫೋನ್ ಪೇ, ಗೂಗಲ್ ಪೇ ಸೇರಿ ಹಲವು ಅಗ್ರಿಗೇಟರ್ ಗಳಲ್ಲಿ ಗ್ರಾಹಕರು ಬಯೋಮೆಟ್ರಿಕ್ ಸೇವೆಯನ್ನು ಆ್ಯಕ್ಟಿವೇಟ್ ಮಾಡಿಕೊಳ್ಳುವ ಮೂಲಕ ಹೊಸ ಫೀಚರ್ ಬಳಸಬಹುದಾಗಿದೆ.
ಸುರಕ್ಷಿತ ಪೇಮೆಂಟ್ ಗೆ ಹೊಸ ವ್ಯವಸ್ಥೆಯು ತುಂಬ ಸಹಕಾರಿಯಾಗಿದೆ. ಬಯೋಮೆಟ್ರಿಕ್ ದೃಢೀಕರಣದಿಂದ ಹ್ಯಾಕಿಂಗ್ ಅಥವಾ ಪಾಸ್ ವರ್ಡ್ ಕಳವು ಸಾಧ್ಯತೆ ಇಲ್ಲದಂತಾಗುತ್ತದೆ. ಅಷ್ಟೇ ಅಲ್ಲ, . ವ್ಯಾಪಾರಿಗಳಿಗೆ ಕೂಡ ಇದರಿಂದ ಉಪಯುಕ್ತವಾಗಲಿದೆ. ವ್ಯಾಪಾರಿಗಳು ಬಯೋಮೆಟ್ರಿಕ್ ಸಾಧನಗಳನ್ನು ಬಳಸಿ ಪಾವತಿಗಳನ್ನು ಸ್ವೀಕರಿಸಬಹುದು. ಇದರಿಂದ ನಗದು ವ್ಯವಹಾರಗಳ ಅವಲಂಬನೆ ಕಡಿಮೆಯಾಗುತ್ತದೆ ಮತ್ತು ಡಿಜಿಟಲ್ ಇಂಡಿಯಾ ಕನಸಿಗೆ ಸಹಕಾರಿಯಾಗುತ್ತದೆ.
ಆನ್ ಲೈನ್ ವಂಚನೆಯನ್ನು ತಡೆಯುವ ದಿಸೆಯಲ್ಲಿ ಬಯೋಮೆಟ್ರಿಕ್ ತಂತ್ರಜ್ಞಾನವು ಬಹುಮುಖ್ಯವಾಗಿದೆ ಎಂದು ಎನ್ ಪಿ ಸಿ ಐ ಮಾಹಿತಿ ನೀಡಿದೆ. ಗ್ರಾಹಕರು ಪೇಮೆಂಟ್ ಆ್ಯಪ್ ಗಳಿಗೆ ತೆರಳುವ ಮೂಲಕ ಈಗಲೇ ಹೊಸ ಫೀಚರ್ ಅನ್ನು ಆ್ಯಕ್ಟಿವೇಟ್ ಮಾಡಿಕೊಳ್ಳಬಹುದಾಗಿದೆ. ಹಾಗೇನಾದರೂ ಹೊಸ ಫೀಚರ್ ಸಿಗದಿದ್ದರೆ, ಆ್ಯಪ್ ಅಪ್ ಡೇಟ್ ಮಾಡಿಕೊಳ್ಳಬಹುದು.