ಉಡುಪಿ: ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ ಮಂಡಲೋತ್ಸವ ಸಮಿತಿ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಪಟ್ಟದ ಶಿಷ್ಯರಾದ ಶ್ರೀ ಸುಶೀಂದ್ರತೀರ್ಥ ಶ್ರೀಪಾದರ ಸಂಕಲ್ಪದಂತೆ ಆ. 1ರಿಂದ 48 ದಿನಗಳ ಕಾಲ ನಡೆಯುವ “ಶ್ರೀಕೃಷ್ಣ ಮಂಡಲೋತ್ಸವ’ ಕಾರ್ಯಕ್ರಮಕ್ಕೆ ಆ. 1ರ ಬೆಳಗ್ಗೆ 6ಕ್ಕೆ ರಾಜಾಂಗಣದಲ್ಲಿ ಪುತ್ತಿಗೆ ಶ್ರೀಪಾದರು “ಶ್ರೀಕೃಷ್ಣ’ ಮಂತ್ರೋಪದೇಶದೊಂದಿಗೆ ಚಾಲನೆ ನೀಡಲಿದ್ದಾರೆ.
ಮಂಡಲೋತ್ಸವ ಅಂಗವಾಗಿ ಬೆಳಗ್ಗೆ 6ರಿಂದ 7ರವರೆಗೆ ವಿವಿಧ ಯೋಗ ಸಂಸ್ಥೆಗಳ ಯೋಗ ಪಟುಗಳಿಂದ 48 ಸೂರ್ಯ ನಮಸ್ಕಾರ, ಪುತ್ತಿಗೆ ಶ್ರೀಪಾದರಿಂದ “ಸ್ವಾಮಿ ಶ್ರೀಕೃಷ್ಣಾಯ ನಮಃ’ ಮಂತ್ರೋಪದೇಶ, ಭಕ್ತರಿಂದ 108 ಬಾರಿ “ಶ್ರೀಕೃಷ್ಣ ಮಂತ್ರ’ ಪಠನ ನಡೆಯಲಿದೆ. ಪ್ರತಿಯೊಬ್ಬ ಭಕ್ತರೂ ಶ್ರೀ ಕೃಷ್ಣನ ನಾಮಸ್ಮರಣೆಯ ಈ ಉತ್ಸವದಲ್ಲಿ ಭಾಗವಹಿಸಬೇಕೆಂದು ಶ್ರೀಗಳು ಭಕ್ತಾದಿಗಳನ್ನು ಆಹ್ವಾನಿಸಿದ್ದಾರೆ.
ಶ್ರೀಕೃಷ್ಣ ಮಂತ್ರದ ಮೂಲಕ ಸಿದ್ದಿ ಪಡೆದ ತಪಸ್ವಿಗಳಾದ ಪರಮಗುರು ಶ್ರೀ ಸುಧೀಂದ್ರ ತೀರ್ಥರು ಅನೇಕ ಭಕ್ತರನ್ನು ಉದ್ಧಾರ ಮಾಡಿದ್ದಾರೆ. ಕಲಿಯುಗದಲ್ಲಿ ಎಲ್ಲ ಕಷ್ಟಗಳ ಪರಿಹಾರಕ್ಕೆ ಕೃಷ್ಣಮಂತ್ರ ರಾಮಬಾಣವಾಗಿದೆ.
ಉತ್ಸವದಲ್ಲಿ ಭಾಗವಹಿಸಲು ಸಾಧ್ಯವಾಗದೇ ಇರುವವರು ಪುತ್ತಿಗೆ ಮಠದ ಯೂಟ್ಯೂಬ್‌ನಲ್ಲಿ ಲೈವ್ ವ್ಯವಸ್ಥೆಯಿದ್ದು, ಆನ್‌ಲೈನ್‌ನಲ್ಲಿ ಭಾಗವಹಿಸಲು ಅವಕಾಶವಿದ್ದು, ಸೆ. 17ರಂದು ಸಮಾಪನಗೊಳ್ಳಲಿದೆ.
ಈ ಜಪಯಜ್ಞ ವನ್ನು ಕೊನೆಯ ಮೂರು ದಿನಗಳಲ್ಲಿ ಕೃಷ್ಣಮಠಕ್ಕೆ ಸಮರ್ಪಿಸಿ ಪ್ರಸಾದ ಸ್ವೀಕರಿಸಬೇಕೆಂದು ಮಠದ ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



















