ಉಡುಪಿ : ತಾಯಿಯ ಕಂಕುಳಿನಲ್ಲಿದ್ದ ಮಗುವಿನ ಮೇಲೆ ನೇರವಾಗಿ ತೆಂಗಿನ ಕಾಯಿ ಬಿದ್ದು ಒಂದೂವರೆ ವರ್ಷದ ಗಂಡು ಮಗು ಮೃತಪಟ್ಟ ಘಟನೆ ಬ್ರಹ್ಮಾವರದ ಹೆರಂಜೆಯಲ್ಲಿ ಮಂಗಳವಾರ ಸಂಭವಿಸಿದೆ.
ಬ್ರಹ್ಮಾವರದಲ್ಲಿ ಫಾಸ್ಟ್ ಫುಡ್ ಅಂಗಡಿ ನಡೆಸುತ್ತಿರುವ ಪ್ರಶಾಂತ್ ಹಾಗೂ ಗೃಹಿಣಿ ಸುಚಿತ್ರಾ ದಂಪತಿಯ ಪುಟ್ಟ ಕಂದಮ್ಮನೇ ವಿಧಿಯಾಟಕ್ಕೆ ಬಲಿಯಾದ ದುರ್ದೈವಿ.
ಮಂಗಳವಾರ ತಾಯಿ ಸುಚಿತ್ರಾ ಅವರು ತಮ್ಮ 6 ವರ್ಷದ ಹಿರಿಯ ಮಗಳನ್ನು ಶಾಲೆಗೆ ಬಿಡಲು ಹೊರಟಿದ್ದರು. ಎಂದಿನಂತೆ ಚಿಕ್ಕ ಮಗುವನ್ನು ಮನೆಯಲ್ಲಿ ಬಿಟ್ಟು ಹೋಗುವ ಬದಲು, ಅಂದು ಮಳೆ ನಿಂತಿದ್ದ ಕಾರಣ ಒಂದೂವರೆ ವರ್ಷದ ಪುಟ್ಟ ಮಗುವನ್ನೂ ಕಂಕುಳಲ್ಲಿ ಎತ್ತಿಕೊಂಡು ಹೊರಟಿದ್ದರು. ಮನೆ ಬಿಟ್ಟು ಸ್ವಲ್ಪ ದೂರ ಸಾಗುತ್ತಿದ್ದಂತೆ, ದಾರಿ ಬದಿಯ ತೋಟದ ಮರದಿಂದ ಅಚಾನಕ್ಕಾಗಿ ತೆಂಗಿನಕಾಯಿಯೊಂದು ನೇರವಾಗಿ ಮಗುವಿನ ತಲೆಯ ಮೇಲೆ ಬಿದ್ದಿದೆ.
ತೆಂಗಿನಕಾಯಿ ಬಿದ್ದ ತಕ್ಷಣ ಮಗುವಿನ ತಲೆಗೆ ಗಂಭೀರ ಪೆಟ್ಟಾಗಿದ್ದು, ಸ್ಥಳೀಯರು ತಕ್ಷಣವೇ ನೆರವಿಗೆ ಧಾವಿಸಿದ್ದಾರೆ. ಪಕ್ಕದ ಮನೆಯವರ ವಾಹನದಲ್ಲಿ ಮಗುವನ್ನು ಮಣಿಪಾಲದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮಗುವಿನ ತಲೆಗೆ ತೀವ್ರ ಸ್ವರೂಪದ ಪೆಟ್ಟಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಿದ ಕೂಡಲೇ ವೈದ್ಯರು ತುರ್ತು ಶಸ್ತ್ರಚಿಕಿತ್ಸೆ ನಡೆಸಿದರು. ಆದರೆ ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೆ ಮಗು ಸಂಜೆಯ ವೇಳೆಗೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದೆ.ಸದ್ಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು,ಇಡೀ ಗ್ರಾಮವೇ ಇದಕ್ಕೆ ಕಂಬನಿ ಮಿಡಿದಿದೆ.
ಇದನ್ನೂ ಓದಿ : ‘ಇನ್ನು ಸಹಿಸಲ್ಲ, ನಾಲಿಗೆ ಕಿತ್ತು ಬಿಸಾಕ್ತಿವಿ ಭಗವಾನ್’ – ಪ್ರಮೋದ್ ಮುತಾಲಿಕ್ ಕೆಂಡ!



















