ವಿಜಯನಗರ : ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ 7 ಜನರು ಸಾವನ್ನಪ್ಪಿದ್ದಾರೆ. ರಾಷ್ಟ್ರೀಯ ಹೆದ್ದಾರಿ 50ರಲ್ಲಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಯ ಗಡಿಭಾಗದ ಹೊಸಪೇಟೆಯ ಟಿಬಿ ಡ್ಯಾಂ ಸಮೀಪ ಈ ದುರಂತ ಸಂಭವಿಸಿದ್ದು, ಹಲವು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮಾಹಿತಿಯ ಪ್ರಕಾರ, ವೇಗವಾಗಿ ಬರುತ್ತಿದ್ದ ಟ್ಯಾಂಕರ್ ಲಾರಿ ಟ್ರ್ಯಾಕ್ಟರ್‌ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ತೀವ್ರತೆಗೆ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ಸೇತುವೆಯಿಂದ ಕೆಳಕ್ಕೆ ಬಿದ್ದಿದೆ. ಅಪಘಾತ ಎಷ್ಟರ ಮಟ್ಟಿಗೆ ಭೀಕರವಾಗಿತ್ತೆಂದರೆ, ಸ್ಥಳದಲ್ಲೇ 7 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು, ಅಪಘಾತದಲ್ಲಿ ಹಲವು ಜನರು ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣವೇ ಸ್ಥಳೀಯರು ಹಾಗೂ ಪೊಲೀಸರು ರಕ್ಷಣಾ ಕಾರ್ಯಾಚರಣೆ ಆರಂಭಿಸಿ ಗಾಯಾಳುಗಳನ್ನು ಹೊಸಪೇಟೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ವೈದ್ಯರು ತುರ್ತು ಚಿಕಿತ್ಸೆ ನೀಡುತ್ತಿದ್ದು, ಗಾಯಾಳುಗಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆ ಆಸ್ಪತ್ರೆಯಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಹಾಗೂ ಹೊಸಪೇಟೆ ಡಿವೈಎಸ್ಪಿ ಕೆಪಿ ಮುರುಳಿಧರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದು, ಅಪಘಾತದ ನಿಖರ ಕಾರಣ ಪತ್ತೆ ಮಾಡಲು ತನಿಖೆ ಆರಂಭಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಪೊಲೀಸರು ವಾಹನ ಸಂಚಾರವನ್ನು ನಿಯಂತ್ರಿಸುತ್ತಿದ್ದಾರೆ.
ಇದನ್ನೂ ಓದಿ : ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಅಕ್ರಮವಾಗಿ ಸಾಗಿಸುತ್ತಿದ್ದ 47 ವನ್ಯಜೀವಿಗಳ ವಶ!



















