ಬೆಂಗಳೂರು : ಈ ಬಾರಿ ನೈರುತ್ಯ ಮುಂಗಾರು ಮಾರುತಗಳು ವಾಡಿಕೆಗಿಂತ ಒಂದು ವಾರ ಮೊದಲೇ ಭಾರತ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಸಾಮಾನ್ಯವಾಗಿ ಮೇ 22ರ ವೇಳೆಗೆ ಅಂಡಮಾನ್ ಸಮುದ್ರ ಭಾಗಕ್ಕೆ ಮುಂಗಾರು ಪ್ರವೇಶಿಸುವುದು ರೂಢಿಯಾಗಿದೆ. ಆದರೆ, ಈ ಬಾರಿ ಮೇ 17ರಲ್ಲೇ ದಕ್ಷಿಣ ಬಂಗಾಳ ಕೊಲ್ಲಿ, ಅಂಡಮಾನ್-ನಿಕೋಬಾರ್ ದ್ವೀಪಗಳು, ಕೇರಳ ಹಾಗೂ ಕರ್ನಾಟಕ ಭಾಗಗಳಿಗೆ ಮುಂಗಾರು ತಲುಪುವ ಲಕ್ಷಣಗಳು ಕಾಣಿಸುತ್ತಿವೆ ಎಂದು ಐಎಂಡಿ ತಿಳಿಸಿದೆ.
ದೇಶದ ಕೃಷಿ ಮತ್ತು ಆರ್ಥಿಕತೆಯ ಜೀವನಾಡಿಯೆಂದು ಕರೆಯಲಾಗುವ ಮುಂಗಾರು ಮಾರುತಗಳು ಈ ಬಾರಿ ಬೇಗ ಆಗಮಿಸುತ್ತಿರುವುದು ರೈತರಲ್ಲಿ ನಿರೀಕ್ಷೆ ಮೂಡಿಸಿದೆ. ಮುಂಗಾರು ಬೇಗ ಆರಂಭವಾದರೆ ಬಿತ್ತನೆ ಕಾರ್ಯಕ್ಕೂ ಅನುಕೂಲವಾಗಲಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಕಳೆದ ಕೆಲವು ದಿನಗಳಿಂದ ಸಮುದ್ರ ಭಾಗಗಳಲ್ಲಿ ಉಂಟಾಗಿರುವ ವಾತಾವರಣದ ಬದಲಾವಣೆಗಳು ಮುಂಗಾರು ಚಟುವಟಿಕೆ ವೇಗ ಪಡೆಯಲು ಕಾರಣವಾಗಿದೆ ಎಂದು ಹವಾಮಾನ ತಜ್ಞರು ಹೇಳುತ್ತಿದ್ದಾರೆ.
ರಾಜ್ಯದ ಹಲವು ಭಾಗಗಳಲ್ಲಿ ಮುಂದಿನ ಮೂರು ದಿನ ಗುಡುಗು, ಮಿಂಚು ಹಾಗೂ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ವಿಶೇಷವಾಗಿ ಉತ್ತರ ಮತ್ತು ದಕ್ಷಿಣ ಒಳನಾಡಿನ ಎಂಟು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕೆಲವೆಡೆ ಭಾರಿ ಮಳೆಯೊಂದಿಗೆ ಗಂಟೆಗೆ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.
ಕರಾವಳಿ ಭಾಗದ ಜನರಿಗೆ ವಿಶೇಷ ಎಚ್ಚರಿಕೆ
ಕರಾವಳಿ ಜಿಲ್ಲೆಗಳ ಜನರು ಹೆಚ್ಚು ಎಚ್ಚರಿಕೆಯಿಂದ ಇರಬೇಕೆಂದು ಐಎಂಡಿ ಸೂಚಿಸಿದೆ. ಒಂದು ಕಡೆ ಮಳೆಯ ಚಟುವಟಿಕೆ ಹೆಚ್ಚಾಗುವ ಸಾಧ್ಯತೆ ಇದ್ದರೆ, ಮತ್ತೊಂದು ಕಡೆ ಉಷ್ಣ ಅಲೆಯ ಆತಂಕವೂ ಎದುರಾಗಿದೆ. ಕರಾವಳಿ ಭಾಗದ ಎರಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಸಮುದ್ರ ತೀರ ಪ್ರದೇಶಗಳಲ್ಲಿ ವಾಸಿಸುವವರು ಹಾಗೂ ಮೀನುಗಾರರು ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಬೆಂಗಳೂರಿನಲ್ಲಿ ಸಾಧಾರಣ ಮಳೆ ಸಾಧ್ಯತೆ
ಬೆಂಗಳೂರು ನಗರದಲ್ಲೂ ಮುಂದಿನ ಎರಡು ದಿನ ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಗುಡುಗು, ಮಿಂಚು ಹಾಗೂ ಬಿರುಗಾಳಿಯೊಂದಿಗೆ ಮಳೆಯಾಗುವ ಸಾಧ್ಯತೆ ಇದ್ದು, ಗಾಳಿಯ ವೇಗ ಗಂಟೆಗೆ 40-50 ಕಿಲೋಮೀಟರ್ ತಲುಪಬಹುದು ಎಂದು ಇಲಾಖೆ ಹೇಳಿದೆ. ಹವಾಮಾನ ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ ನಗರಕ್ಕೆ ಆರೆಂಜ್ ಅಲರ್ಟ್ ನೀಡಲಾಗಿದೆ.
ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ ರಾಜ್ಯದಲ್ಲಿ ಮಳೆ ಚಟುವಟಿಕೆ ತೀವ್ರಗೊಳ್ಳುತ್ತಿದೆ. ಮೇ 14ರಿಂದ 16ರವರೆಗೆ ಹಲವೆಡೆ ಆಲಿಕಲ್ಲು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕೆಲ ಜಿಲ್ಲೆಗಳಲ್ಲಿ ಸಿಡಿಲು ಬಡಿತ ಮತ್ತು ಬಿರುಗಾಳಿಯ ಆತಂಕವೂ ಇರುವುದರಿಂದ ಸಾರ್ವಜನಿಕರು ಸುರಕ್ಷಿತ ಸ್ಥಳಗಳಲ್ಲಿ ಇರಲು ಸೂಚಿಸಲಾಗಿದೆ.
ಇನ್ನು, ಭಾರಿ ಮಳೆ, ಬಿರುಗಾಳಿ ಹಾಗೂ ಆಲಿಕಲ್ಲು ಮಳೆಯ ಹಿನ್ನೆಲೆಯಲ್ಲಿ ರೈತರು ತಮ್ಮ ಬೆಳೆಗಳನ್ನು ಸುರಕ್ಷಿತವಾಗಿಡುವಂತೆ ಐಎಂಡಿ ಸಲಹೆ ನೀಡಿದೆ. ಸಾರ್ವಜನಿಕರು ಅಗತ್ಯವಿಲ್ಲದೆ ಹೊರಗೆ ಸಂಚರಿಸುವುದನ್ನು ತಪ್ಪಿಸಲು ಹಾಗೂ ಮರಗಳ ಕೆಳಗೆ ನಿಲ್ಲದಂತೆ ಎಚ್ಚರಿಕೆ ನೀಡಲಾಗಿದೆ. ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಕೂಡ ಮುನ್ನೆಚ್ಚರಿಕೆ ಕ್ರಮ ಪಾಲಿಸಲು ಸೂಚಿಸಿದೆ.
ಇದನ್ನೂ ಓದಿ : ಬೆಂಗಳೂರಲ್ಲಿ ಹಿಟ್ ಅಂಡ್ ರನ್ಗೆ ವ್ಯಕ್ತಿ ಬಲಿ.. ಇಬ್ಬರು ಗಂಭೀರ



















