ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾರತದ ಹಾಕಿ ತಂಡ ಗೆಲುವಿನ ಖಾತೆ ತೆರೆದಿದೆ.
ಭಾರತ ಪುರುಷರ ಹಾಕಿ ತಂಡ ತನ್ನ ಮೊದಲ ಪಂಧ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 3-2 ಗೋಲುಗಳಿಂದ ಜಯ ಸಾಧಿಸುವುದರ ಮೂಲಕ ಶುಭಾರಂಭ ಮಾಡಿದೆ. ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಭಾರತ ತಂಡ ಆರಂಭದಲ್ಲಿ ಹಿನ್ನಡೆ ಅನುಭವಿಸಿತ್ತು.
8ನೇ ನಿಮಿಷದಲ್ಲೇ ಗೋಲು ಬಾರಿಸಿ 0-1 ಅಂತರದಿಂದ ಮುನ್ನಡೆ ಸಾಧಿಸಿದ್ದ ನ್ಯೂಜಿಲೆಂಡ್ ಗೆ ನಂತರ ಭಾರತ ತಿರುಗೇಟು ನೀಡಿತು. 24ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸುವಲ್ಲಿ ಮನ್ದೀಪ್ ಸಿಂಗ್ ಯಶಸ್ವಿಯಾದರು. ಆಗ ಗೋಲುಗಳ ಅಂತರವನ್ನು 1-1ಕ್ಕೆ ಸಮಬಲಗೊಳಿಸಿಕೊಂಡರು. ಗೋಲುಗಳು ಸಮಗೊಳ್ಳುತ್ತಿದ್ದಂತೆ ಭಾರತೀಯ ಆಟಗಾರರು ಪ್ರಬಲ ಪ್ರತಿದಾಳಿ ನಡೆಸಿತು. ಪರಿಣಾಮ 34ನೇ ನಿಮಿಷದಲ್ಲಿ ವಿವೇಕ್ ಸಾಗರ್ ಪ್ರಸಾದ್ ನೀಡಿದ ಪಾಸ್ ನ್ನು ಮನ್ದೀಪ್ ಗೋಲು ಬಲೆಯೊಳಗೆ ತಲುಪಿಸಿದರು.
2-1 ಅಂತರದಿಂದ ಮುನ್ನಡೆ ಸಾಧಿಸಿ ಭಾರತ ತಂಡವು ಉತ್ತಮ ಪ್ರದರ್ಶನ ಮುಂದುವರೆಸಿತು. ನಂತರ 52ನೇ ನಿಮಿಷದಲ್ಲಿ ಸಿಕ್ಕ ಅವಕಾಶವನ್ನು ನ್ಯೂಜಿಲೆಂಡ್ ಸದುಪಯೋಗಪಡಿಸಿಕೊಂಡು ಗೋಲಿನ ಅಂತರವನ್ನು 2-2 ರಂತೆ ಸಮಗೊಳಿಸಿತು. ಹೀಗಾಗಿ ಪಂದ್ಯ ಡ್ರಾ ಆಗಬಹುದು ಅನ್ನುವಷ್ಟರಲ್ಲಿ ಭಾರತಕ್ಕೆ 59ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್ ಲಭಿಸಿತು. ಈ ಕೊನೆಯ ಅವಕಾಶವನ್ನು ನಾಯಕ ಹರ್ಮನ್‌ಪ್ರೀತ್ ಸಿಂಗ್ ಗೋಲಾಗಿ ಪರಿವರ್ತಿಸಿ, ತಂಡ ಗೆಲುವಿನ ಮೂಲಕ ಶುಭಾರಂಭ ಮಾಡುವಂತೆ ಮಾಡಿದರು. ಕೊನೆಗೆ ಭಾರತ ತಂಡ 3-2 ಗೋಲುಗಳ ಅಂತರದಿಂದ ಗೆಲುವು ಕಂಡಿತು. ಭಾರತ ತಂಡ ತನ್ನ ಎರಡನೇ ಪಂದ್ಯದಲ್ಲಿ ಅರ್ಜೆಂಟೀನಾ ತಂಡವನ್ನು ಎದುರಿಸಲಿದೆ.