ಬೆಂಗಳೂರು : ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್‌ಜಿ) ನಡುವಿನ ಹೈ-ವೋಲ್ಟೇಜ್ ಐಪಿಎಲ್ ಪಂದ್ಯಕ್ಕೆ ಲಕ್ನೋದ ಏಕನಾ ಕ್ರೀಡಾಂಗಣ ಸಾಕ್ಷಿಯಾಗಿದೆ. ಆದರೆ, ಈ ಪಂದ್ಯದ ಆರಂಭಕ್ಕೂ ಮುನ್ನವೇ ಕ್ರಿಕೆಟ್ ದಿಗ್ಗಜ, ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ ಅವರ ಅಭಿಮಾನಿಗಳ ಕ್ರೇಜ್ ಕ್ರೀಡಾಂಗಣದ ಹೊರಗೆ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ.
ಪಂದ್ಯದ ದಿನ ಕ್ರೀಡಾಂಗಣದ ಹೊರಭಾಗದಲ್ಲಿ ವಿರಾಟ್ ಕೊಹ್ಲಿ ಅವರ ಬರೋಬ್ಬರಿ 345 ಚದರ ಅಡಿ ವಿಸ್ತೀರ್ಣದ ಬೃಹತ್ ಹಾಗೂ ಕೈಯಿಂದಲೇ ಬಿಡಿಸಲಾದ ಕಲಾಕೃತಿಯನ್ನು ಅಭಿಮಾನಿಗಳು ಅನಾವರಣಗೊಳಿಸಿದ್ದಾರೆ. ಡಿಜಿಟಲ್ ಪೋಸ್ಟರ್‌ಗಳ ಹಾವಳಿಯ ನಡುವೆ, ಸಂಪೂರ್ಣವಾಗಿ ಕಪ್ಪು ಮತ್ತು ಬಿಳುಪಿನಲ್ಲಿ ರಚಿತವಾದ ಈ ಕಲಾಕೃತಿಯು ನೋಡುಗರ ಕಣ್ಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ದಾಖಲೆ ಬರೆದ ಅಭಿಮಾನ ಹಾಗೂ ಕಲಾಕೃತಿಯ ರೂವಾರಿ
ಸುಮಾರು 729 ಪುಟಗಳನ್ನು ಒಟ್ಟುಗೂಡಿಸಿ ರಚಿಸಲಾದ ಈ ಬೃಹತ್ ಚಿತ್ರವನ್ನು ಪೂರ್ಣಗೊಳಿಸಲು ಬರೋಬ್ಬರಿ 500 ಗಂಟೆಗಳ ಕಾಲ ಶ್ರಮಿಸಲಾಗಿದೆ. ಉತ್ತರ ಪ್ರದೇಶದ ಶಿಕೋಹಾಬಾದ್ ಮೂಲದ ಯುವ ಕಲಾವಿದ ಕಾರ್ತಿಕ್ ಪಾಂಡೆ ಈ ಅದ್ಭುತ ಕಲಾಕೃತಿಯ ಹಿಂದಿರುವ ಪ್ರಮುಖ ರೂವಾರಿ. ಈ ಹಿಂದೆಯೂ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ವಿಶ್ವದ ಅತಿ ದೊಡ್ಡ ಕೊಹ್ಲಿ ಸ್ಕೆಚ್ ರಚಿಸಿ ‘ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್’ನಲ್ಲಿ ಸ್ಥಾನ ಪಡೆದಿದ್ದ ಕಾರ್ತಿಕ್, ತಮ್ಮ ಆರಾಧ್ಯ ದೈವನ ಮೇಲಿನ ಅಭಿಮಾನವನ್ನು ಈ ಮೂಲಕ ಮತ್ತೊಮ್ಮೆ ಮೆರೆದಿದ್ದಾರೆ. ಪಂದ್ಯದ ದಿನದ ಕಟ್ಟುನಿಟ್ಟಿನ ಭದ್ರತೆಯ ಕಾರಣ, ಈ ಬೃಹತ್ ಕಲಾಕೃತಿಯನ್ನು ಮುಂಚಿತವಾಗಿಯೇ ಅಭ್ಯಾಸದ ದಿನದಂದು ಕ್ರೀಡಾಂಗಣದ ಹೊರಗೆ ತಂದು ಸ್ಥಾಪಿಸಲಾಗಿತ್ತು.
ಆರ್‌ಸಿಬಿ ಜರ್ಸಿ ಬದಲು ಟೀಮ್ ಇಂಡಿಯಾ ಅವತಾರ
ಸಾಮಾನ್ಯವಾಗಿ ಐಪಿಎಲ್ ಪಂದ್ಯಗಳ ವೇಳೆ ಆಟಗಾರರನ್ನು ಅವರ ಫ್ರಾಂಚೈಸಿ ಜರ್ಸಿಯಲ್ಲಿಯೇ ಬಿಂಬಿಸಲಾಗುತ್ತದೆ. ಆದರೆ, ಇಲ್ಲಿನ ಅಭಿಮಾನಿಗಳು ವಿರಾಟ್ ಕೊಹ್ಲಿ ಅವರನ್ನು ಆರ್‌ಸಿಬಿ ಜರ್ಸಿಯ ಬದಲಾಗಿ ಟಿ20 ಅಂತರರಾಷ್ಟ್ರೀಯ ಪಂದ್ಯಗಳ ಲುಕ್‌ನಲ್ಲಿಯೇ ಚಿತ್ರಿಸಿರುವುದು ವಿಶೇಷವಾಗಿತ್ತು. ಲಕ್ನೋದಾದ್ಯಂತ ಕೊಹ್ಲಿ ಹೊಂದಿರುವ ಜನಪ್ರಿಯತೆಗೆ ಈ ಕಲಾಕೃತಿ ಕೈಗನ್ನಡಿಯಾಗಿದ್ದು, ಸಾವಿರಾರು ಅಭಿಮಾನಿಗಳು ‘ಕೊಹ್ಲಿ 18’ ಬರೆದ ಜರ್ಸಿಯನ್ನು ಧರಿಸಿ ಕ್ರೀಡಾಂಗಣದ ಗೇಟ್ ತೆರೆಯುವ ಮುನ್ನವೇ ಹಾಜರಾಗಿದ್ದರು.
ಕಿವಿಗಡಚಿಕ್ಕುವಂತೆ ಮೊಳಗಿದ ‘ವಿರಾಟ್’ ಘೋಷಣೆ
ಪಂದ್ಯಕ್ಕೂ ಮುನ್ನ ಅಭ್ಯಾಸಕ್ಕಾಗಿ ವಿರಾಟ್ ಕೊಹ್ಲಿ ಮೈದಾನಕ್ಕಿಳಿಯುತ್ತಿದ್ದಂತೆಯೇ ಕ್ರೀಡಾಂಗಣದ ವಾತಾವರಣ ಸಂಪೂರ್ಣವಾಗಿ ಬದಲಾಗಿತ್ತು. ನೆಚ್ಚಿನ ಆಟಗಾರನನ್ನು ಹತ್ತಿರದಿಂದ ನೋಡಲು ಪ್ರೇಕ್ಷಕರು ಬೌಂಡರಿ ಗೆರೆಯತ್ತ ಧಾವಿಸಿದ್ದರು. ಈ ವೇಳೆ ಕ್ರೀಡಾಂಗಣದಲ್ಲಿ ಮೊಳಗಿದ ‘ವಿರಾಟ್, ವಿರಾಟ್’ ಘೋಷಣೆಗಳು ಎಷ್ಟರಮಟ್ಟಿಗೆ ಜೋರಾಗಿತ್ತು ಎಂದರೆ, ಟಾಸ್ ಪ್ರಕ್ರಿಯೆಯ ವೇಳೆ ಆರ್‌ಸಿಬಿ ನಾಯಕ ರಜತ್ ಪಾಟೀದಾರ್ ಅವರಿಗೆ ಪ್ರಸಾರಕರ ಮಾತುಗಳೇ ಕೇಳದಷ್ಟು ಗದ್ದಲ ಏರ್ಪಟ್ಟಿತ್ತು. ಕ್ರೀಡಾಂಗಣದಲ್ಲಿ ನೆರೆದಿದ್ದ ಸಹಸ್ರಾರು ಅಭಿಮಾನಿಗಳ ಪ್ರೀತಿಗೆ ವಿರಾಟ್ ಕೊಹ್ಲಿ ಕೂಡ ತಮ್ಮ ಅಭ್ಯಾಸದ ನಡುವೆಯೇ ಕೈಬೀಸಿ ಕೃತಜ್ಞತೆ ಸಲ್ಲಿಸಿದರು.
ಇದನ್ನೂ ಓದಿ : ಹೈಡ್ರೋಜನ್ ಚಾಲಿತ ಸ್ವಿಫ್ಟ್ ; ಕೇವಲ ನೀರು ಹೊರಸೂಸುವ ಸುಜುಕಿಯ ಹೊಸ ಕ್ರಾಂತಿ!


















