ಶ್ರೀನಗರ : ಕೆಲವು ವರ್ಷಗಳ ಹಿಂದೆ ಭಯೋತ್ಪಾದನೆಯಿಂದ ಬಹುತೇಕ ಮುಕ್ತವಾಗಿದ್ದ ಜಮ್ಮು ವಲಯದಲ್ಲಿ ಇದೀಗ ಭದ್ರತಾ ಸವಾಲುಗಳು ತೀವ್ರಗೊಂಡಿವೆ. ಈ ಪ್ರದೇಶದಲ್ಲಿ ಪ್ರತಿದಿನ ಸುಮಾರು 120 ಉಗ್ರ ನಿಗ್ರಹ ಕಾರ್ಯಾಚರಣೆಗಳು ನಡೆಯುತ್ತಿದ್ದು, ಇದು ಇಲ್ಲಿನ ಭಯೋತ್ಪಾದನಾ ಬೆದರಿಕೆಯ ಗಂಭೀರತೆಯನ್ನು ಎತ್ತಿ ತೋರಿಸಿದೆ. ಜಮ್ಮು ವಲಯದಲ್ಲಿ ಬೀಡುಬಿಟ್ಟಿರುವ ವಿದೇಶಿ ಉಗ್ರರ ಉಪಸ್ಥಿತಿಯು ಪ್ರಮುಖ ಭದ್ರತಾ ಸವಾಲಾಗಿ ಪರಿಣಮಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ಜಮ್ಮು ವಲಯದಲ್ಲಿ ನಾವು ಪ್ರತಿದಿನ 120 ಉಗ್ರ ನಿಗ್ರಹ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದೇವೆ. ಇದು ನಮ್ಮ ದೈನಂದಿನ ಕಾಯಕವಾಗಿದೆ. ಗುಪ್ತಚರ ಮಾಹಿತಿ ಆಧಾರಿತ ಅಥವಾ ಶಂಕಾಸ್ಪದ ಚಟುವಟಿಕೆಗಳ ಮೇಲಿನ ಕಾರ್ಯಾಚರಣೆಗಳು ನಿರಂತರವಾಗಿ ನಡೆಯುತ್ತಿವೆ,” ಎಂದು ಜಮ್ಮು ವಲಯದ ಪೊಲೀಸ್ ಮುಖ್ಯಸ್ಥ ಭೀಮ್ ಸೇನ್ ಹೇಳಿದ್ದಾರೆ. “ಈ ನಿರಂತರ ಕಾರ್ಯಾಚರಣೆಗಳ ಮೂಲಕ, ಜಮ್ಮುವಿನ ಎತ್ತರದ ಪ್ರದೇಶಗಳಲ್ಲಿ ಅಡಗಿರುವ ವಿದೇಶಿ ಉಗ್ರರನ್ನು ಶೀಘ್ರದಲ್ಲೇ ಮಟ್ಟ ಹಾಕುತ್ತೇವೆ ಎಂಬ ವಿಶ್ವಾಸವಿದೆ. ಕಳೆದ ಎರಡು ವರ್ಷಗಳಿಂದ ವಿದೇಶಿ ಉಗ್ರರು ನಮಗೆ ದೊಡ್ಡ ತಲೆನೋವಾಗಿದ್ದಾರೆ. ಆದರೂ ನಾವು ಉಗ್ರ ನಿಗ್ರಹ ದಳ ಮತ್ತು ಗಡಿ ಭದ್ರತಾ ವ್ಯವಸ್ಥೆಯನ್ನು ಬಲಪಡಿಸುತ್ತಿದ್ದೇವೆ,” ಎಂದು ಅವರು ವಿವರಿಸಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಜಮ್ಮು ವಲಯವು ಭಯೋತ್ಪಾದಕರ ಪ್ರಮುಖ ಗುರಿಯಾಗಿದೆ. ಅರಣ್ಯ ಯುದ್ಧದಲ್ಲಿ ಉನ್ನತ ತರಬೇತಿ ಪಡೆದ ಡಜನ್‌ಗಟ್ಟಲೆ ವಿದೇಶಿ ಉಗ್ರರು ಇಲ್ಲಿನ ವಿವಿಧ ಅರಣ್ಯ ಪ್ರದೇಶಗಳಲ್ಲಿ ಬೀಡುಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

2021ರ ಅಕ್ಟೋಬರ್‌ನಲ್ಲಿ ಪೂಂಛ್ ಜಿಲ್ಲೆಯ ಸುರನ್‌ಕೋಟ್ ಪ್ರದೇಶದಲ್ಲಿ ಪಾಕಿಸ್ತಾನ ಬೆಂಬಲಿತ ಉಗ್ರರು ಭಾರತೀಯ ಯೋಧರ ಮೇಲೆ ಹೊಂಚು ದಾಳಿ ನಡೆಸಿದಾಗಿನಿಂದ ಈ ವಲಯದಲ್ಲಿ ಭಯೋತ್ಪಾದಕ ಕೃತ್ಯಗಳು ಹೆಚ್ಚಾದವು.
ಅಂದಿನಿಂದಲೂ ಸೇನೆ ಮತ್ತು ನಾಗರಿಕರ ಮೇಲೆ ಸರಣಿ ದಾಳಿಗಳು ನಡೆಯುತ್ತಲೇ ಇವೆ. ಈ ಅವಧಿಯಲ್ಲಿ ಹಲವು ಹಿಂದೂಗಳು ಮತ್ತು ಮಾತಾ ವೈಷ್ಣೋದೇವಿ ಯಾತ್ರಿಕರು ಉಗ್ರರ ದಾಳಿಗೆ ಬಲಿಯಾಗಿದ್ದಾರೆ. ಅಮೆರಿಕ ನಿರ್ಮಿತ ಎಂ4 ಕಾರ್ಬೈನ್‌ನಂತಹ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಮತ್ತು ಅತ್ಯಾಧುನಿಕ ಸಂವಹನ ವ್ಯವಸ್ಥೆಗಳನ್ನು ಹೊಂದಿರುವ ಉಗ್ರರು ಭದ್ರತಾ ಪಡೆಗಳಿಗೆ ಗಂಭೀರ ಸವಾಲು ಒಡ್ಡಿದ್ದಾರೆ.
ಜಮ್ಮು ವಲಯದ ಹಲವು ಭಾಗಗಳಲ್ಲಿ ಹೆಚ್ಚಿನ ಸಂಖ್ಯೆಯ ಸೈನಿಕರನ್ನು ನಿಯೋಜಿಸಲಾಗಿದ್ದರೂ, ದುರ್ಗಮ ಪರ್ವತಗಳು ಮತ್ತು ದಟ್ಟ ಅರಣ್ಯಗಳಲ್ಲಿ ಅಡಗಿರುವ ಉಗ್ರರನ್ನು ಮಟ್ಟಹಾಕುವಲ್ಲಿ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ನಾಗರಿಕರು ಶಂಕಾಸ್ಪದ ಚಲನವಲನಗಳ ಬಗ್ಗೆ ಪ್ರತಿದಿನ ಮಾಹಿತಿ ನೀಡಿದರೂ, ಭದ್ರತಾ ಪಡೆಗಳ ಕ್ಷಿಪ್ರ ಕಾರ್ಯಾಚರಣೆಯ ಹೊರತಾಗಿಯೂ ಉಗ್ರರು ತಪ್ಪಿಸಿಕೊಳ್ಳುತ್ತಿದ್ದಾರೆ.
ಪ್ರತಿದಿನ 120 ಕಾರ್ಯಾಚರಣೆಗಳೆಂದರೆ, ತಿಂಗಳಿಗೆ 3,600 ಮತ್ತು ವರ್ಷಕ್ಕೆ ಸುಮಾರು 44,000 ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ. ಇಷ್ಟು ದೊಡ್ಡ ಪ್ರಮಾಣದ ಕಾರ್ಯಾಚರಣೆಗಳು ಈ ವಲಯದಲ್ಲಿನ ಭದ್ರತಾ ಸವಾಲುಗಳನ್ನು ಮಾತ್ರವಲ್ಲದೆ, ಖಚಿತ ಗುಪ್ತಚರ ಮಾಹಿತಿಯ ಕೊರತೆಯನ್ನೂ ಸೂಚಿಸುತ್ತದೆ ಎಂದು ಕೆಲವು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
2021ರವರೆಗೆ ಜಮ್ಮು ವಲಯವು ಬಹುತೇಕ ಭಯೋತ್ಪಾದನೆ ಮುಕ್ತವಾಗಿತ್ತು ಮತ್ತು ಉಗ್ರ ನಿಗ್ರಹ ಕಾರ್ಯಾಚರಣೆಗಳ ಗಮನವು ಕಾಶ್ಮೀರ ಕಣಿವೆಯತ್ತ ಕೇಂದ್ರೀಕೃತವಾಗಿತ್ತು. ಇದೀಗ ಉಗ್ರರು ತಮ್ಮ ನೆಲೆಯನ್ನು ಜಮ್ಮುವಿನ ಪರ್ವತ ಪ್ರದೇಶಗಳಿಗೆ ಸ್ಥಳಾಂತರಿಸಿದ್ದಾರೆ ಅಥವಾ ವಿಸ್ತರಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ.