ಬೀದರ್ : ಬೀದರ್ ಸಮೀಪ ತೆಲಂಗಾಣ-ಕರ್ನಾಟಕ ಗಡಿ ಭಾಗದಲ್ಲಿ ಕೆಕೆಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
ಮೃತರನ್ನು ಬೀದರ್ ತಾಲೂಕಿನ ಬಂಗ್ಲಾ ಮರ್ಜಾಪುರ ಗ್ರಾಮದ ನರಸಿಂಹಲು(54) ಹಾಗೂ ಅರುಣ್(22) ಎಂದು ಗುರುತಿಸಲಾಗಿದೆ. ಇಬ್ಬರೂ ತಮ್ಮ ಗ್ರಾಮದಿಂದ ಮದುವೆ ನಿಮಿತ್ತ ಕೌಠಾ ಗ್ರಾಮಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಹುಮನಾಬಾದ್‌ನಿಂದ ತೆಲಂಗಾಣದ ಹೈದರಾಬಾದ್ ಕಡೆಗೆ ತೆರಳುತ್ತಿದ್ದ ಕೆಕೆಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಡಿಕ್ಕಿ ಭಾರೀ ಪ್ರಮಾಣದಲ್ಲಿ ಸಂಭವಿಸಿದ್ದರಿಂದ ಬೈಕ್ ಸಂಪೂರ್ಣ ಜಖಂಗೊಂಡಿದ್ದು, ಸವಾರರಿಬ್ಬರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಅಪಘಾತದ ತೀವ್ರತೆಗೆ ಬಸ್‌ನಲ್ಲಿದ್ದ ಪ್ರಯಾಣಿಕರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಬಸ್‌ನಲ್ಲಿ ಹೈದರಾಬಾದ್‌ಗೆ ಪ್ರಯಾಣಿಸುತ್ತಿದ್ದ ಸುಮಾರು 13 ಮಂದಿ ಪ್ರಯಾಣಿಕರಿಗೆ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಬೀದರ್‌ನ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಬಳಿಕ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದ್ದು, ಗಾಯಾಳುಗಳ ಚಿಕಿತ್ಸೆಯ ಮೇಲೂ ನಿಗಾ ವಹಿಸಲಾಗಿದೆ.
ಈ ದುರ್ಘಟನೆ ಬೀದರ್‌ನ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತದ ನಿಖರ ಕಾರಣದ ಕುರಿತು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ತಮಿಳುನಾಡು ರಾಜಕೀಯದಲ್ಲಿ ಬಿರುಗಾಳಿ : ‘ಟಿವಿಕೆ’ ಸರ್ಕಾರಕ್ಕೆ AIADMK ಬಂಡಾಯ ಬಣದ ಬೆಂಬಲ



















