ಉಡುಪಿ : ಅರಬ್ಬಿ ಸಮುದ್ರದಲ್ಲಿ ವಾತಾವರಣ ಅಸ್ಥಿರಗೊಂಡಿರುವ ಹಿನ್ನೆಲೆ ಕರಾವಳಿ ಭಾಗದ ಮೀನುಗಾರರಿಗೆ ಹವಾಮಾನ ಇಲಾಖೆ ಬಿರುಗಾಳಿ ಎಚ್ಚರಿಕೆ ನೀಡಿದೆ. ಮೇ 23ರವರೆಗೆ ಸಮುದ್ರದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಕಡಲಿಗೆ ಇಳಿಯದಂತೆ ಸೂಚಿಸಲಾಗಿದೆ. ಸಮುದ್ರದಲ್ಲಿ ಈಗಾಗಲೇ ಮೀನುಗಾರಿಕೆಗೆ ತೆರಳಿರುವ ಯಾಂತ್ರೀಕೃತ ಬೋಟುಗಳು ಹೆಚ್ಚಿನ ಜಾಗರೂಕತೆ ವಹಿಸಬೇಕು ಅಥವಾ ತಕ್ಷಣ ಸುರಕ್ಷಿತವಾಗಿ ತೀರ ಪ್ರದೇಶ ಸೇರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಅರಬ್ಬಿ ಸಮುದ್ರದ ವಿವಿಧ ಭಾಗಗಳಲ್ಲಿ ಗಂಟೆಗೆ 40ರಿಂದ 60 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಇದರಿಂದ ಸಮುದ್ರ ಅಲೆಗಳ ಅಬ್ಬರ ಹೆಚ್ಚಾಗುವ ಸಾಧ್ಯತೆ ಇದ್ದು, ಕರಾವಳಿ ಭಾಗದ ಮೀನುಗಾರರಲ್ಲಿ ಆತಂಕ ಮನೆಮಾಡಿದೆ. ಮಲ್ಪೆ ಸೇರಿದಂತೆ ಹಲವು ಬಂದರು ಪ್ರದೇಶಗಳಲ್ಲಿ ಸಮುದ್ರಕ್ಕೆ ತೆರಳಿದ್ದ ಮೀನುಗಾರಿಕಾ ದೋಣಿಗಳು ಮುನ್ನೆಚ್ಚರಿಕೆಯಾಗಿ ವಾಪಸ್ ಆಗುತ್ತಿರುವ ದೃಶ್ಯಗಳು ಕಂಡುಬಂದಿವೆ.

ಕರ್ನಾಟಕ ಸೇರಿದಂತೆ ಕೇರಳ, ಗೋವಾ, ಮಹಾರಾಷ್ಟ್ರ ಹಾಗೂ ತಮಿಳುನಾಡು ರಾಜ್ಯಗಳ ಕರಾವಳಿ ಪ್ರದೇಶಗಳಿಗೂ ಈಗಾಗಲೇ ಎಚ್ಚರಿಕೆ ಸಂದೇಶ ರವಾನಿಸಲಾಗಿದೆ. ಎಲ್ಲಾ ಕರಾವಳಿ ಜಿಲ್ಲೆಗಳ ಅಧಿಕಾರಿಗಳು ಹಾಗೂ ಮೀನುಗಾರಿಕಾ ಇಲಾಖೆಯ ಸಿಬ್ಬಂದಿಗೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಹವಾಮಾನ ಇಲಾಖೆ ನೀಡುತ್ತಿರುವ ಅಧಿಕೃತ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳು ಮೀನುಗಾರರಿಗೆ ಮನವಿ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಸಮುದ್ರಕ್ಕೆ ಇಳಿಯಬಾರದು ಹಾಗೂ ಸುರಕ್ಷತೆ ಕಡೆ ಹೆಚ್ಚಿನ ಗಮನ ಹರಿಸಬೇಕು ಎಂದು ಎಚ್ಚರಿಕೆ ನೀಡಲಾಗಿದೆ.
ಇದನ್ನೂ ಓದಿ : “118 ಕೋಟಿ ನಕಲಿ ಬಿಲ್ ಹಗರಣ” ತನಿಖೆ – 310 ಇಂಜಿನಿಯರ್‌ಗಳಿಗಾಗಿ ಜಿಬಿಎ ಹುಡುಕಾಟ!



















