ಉತ್ತರ ಪ್ರದೇಶ: ಕಲ್ಲು ಕ್ವಾರಿಯ ಒಂದು ಭಾಗ ಕುಸಿದು ಕೆಲವು ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಅವಶೇಷಗಳಡಿ ಸಿಲುಕಿರುವ ಜನರ ನಿಖರ ಸಂಖ್ಯೆ ಇನ್ನೂ ತಿಳಿದಿಲ್ಲ. ಆದರೆ ಸೋನ್‌ಭದ್ರ ಜಿಲ್ಲೆಯ ಬಿಲ್ಲಿ ಮಾರ್ಕುಂಡಿ ಗ್ರಾಮದ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಉತ್ತರ ಪ್ರದೇಶದ ಸಚಿವ ಸಂಜೀವ್ ಕುಮಾರ್ ಗೊಂಡ್, ಸುಮಾರು 12 ಜನ ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿರಬಹುದು ಎಂದು ಹೇಳಿದರು.
ಘಟನೆ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಬಿ.ಎನ್.ಸಿಂಗ್, ಕೃಷ್ಣಾ ಮೈನ್ಸ್ ಕ್ವಾರಿಯೊಳಗಿನ ಗೋಡೆ ಇದ್ದಕ್ಕಿದ್ದಂತೆ ಕುಸಿದು ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಮಿರ್ಜಾಪುರದಿಂದ ಸ್ಥಳಕ್ಕೆ ಆಗಮಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ ಎಂದು ತಿಳಿಸಿದರು.
ಸ್ಥಳೀಯ ಶಾಸಕರೂ ಆಗಿರುವ ಉತ್ತರ ಪ್ರದೇಶದ ಸಮಾಜ ಕಲ್ಯಾಣ ರಾಜ್ಯ ಸಚಿವ ಗೊಂಡ್, ಜಿಲ್ಲಾ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದರು. ಸ್ಥಳದಲ್ಲಿದ್ದ ಜನರು ನೀಡಿದ ಮಾಹಿತಿಯನ್ನು ಉಲ್ಲೇಖಿಸಿ, ಸುಮಾರು 12 ಜನ ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿರಬಹುದು ಎಂದು ಅವರು ಹೇಳಿದರು.
ಗಣಿ ಯಾವ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿತ್ತು ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು. ತಪ್ಪಿತಸ್ಥರೆಂದು ಕಂಡುಬಂದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಾವು ಸಂತ್ರಸ್ತ ಕುಟುಂಬಗಳ ಜೊತೆಗೆ ನಿಲ್ಲುತ್ತೇವೆ. ಘಟನೆಯಲ್ಲಿ ಹಾನಿಗೊಳಗಾದ ಜನರಿಗೆ ಪರಿಹಾರ ನೀಡಲಾಗುವುದು. ಇದು ತುಂಬಾ ದುಃಖಕರ ಘಟನೆ” ಎಂದರು.
ಇದನ್ನೂ ಓದಿ : ಚರ್ಮದ ಮೇಲೆ ಮೂಡುವ ನರಹುಲಿ ಮಚ್ಚೆಗಳ ಸಮಸ್ಯೆಗೆ ಪರಿಹಾರ ಬೇಕೆ? ಇಲ್ಲಿದೆ ಮಾಹಿತಿ



















