ಮುಂಬೈ: ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಅಘೋಷಿತ ಯುದ್ಧ ಆರಂಭವಾಗಿದೆ. ಭಾರತೀಯ ಸೇನೆಯಂತೂ ಲಾಹೋರ್, ರಾವಲ್ಪಿಂಡ್, ಸಿಯಾಲ್ ಕೋಟ್ ಸೇರಿ ಹಲವೆಡೆ ನಿರಂತರವಾಗಿ ದಾಳಿ ನಡೆಸುತ್ತಿದೆ. ಗಡಿಯಲ್ಲಿ ಕೂಡ ಪಾಕಿಸ್ತಾನದ ನೂರಾರು ಡ್ರೋನ್ ಗಳು, ಕ್ಷಿಪಣಿಗಳನ್ನು ಹೊಡೆದುರುಳಿಸಿದೆ. ಇದರಿಂದಾಗಿ ಯುದ್ಧದ ಭೀತಿ ಆರಂಭವಾಗಿದೆ. ಇದರ ಬೆನ್ನಲ್ಲೇ, ಭಾರತದ ಷೇರು ಮಾರುಕಟ್ಟೆ ಕುಸಿತವುಂಟಾಗಿದ್ದು, ಹೂಡಿಕೆದಾರರ 3.5 ಲಕ್ಷ ಕೋಟಿ ರೂ. ಸಂಪತ್ತು ಕರಗಿದೆ.
ಸೆನ್ಸೆಕ್ಸ್ ಸುಮಾರು 700 ಅಂಕಗಳಷ್ಟು ಕುಸಿತವುಂಟಾಗಿದೆ. ನಿಫ್ಟಿಯೂ 200 ಪಾಯಿಂಟ್ಸ್ ಗಳಿಗಿಂತ ಹೆಚ್ಚು ಕುಸಿತ ಕಂಡಿದೆ. ಇದರಿಂದಾಗಿ ಹೂಡಿಕೆದಾರರಿಗೆ 3.5 ಲಕ್ಷ ಕೋಟಿ ರೂ. ನಷ್ಟವಾಗಿದೆ. ಬಿಎಸ್ಇ-ಲಿಸ್ಟ್ ಆಗಿರುವ ಕಂಪನಿಗಳ ಮಾರುಕಟ್ಟೆ ಬಂಡವಾಳವು 418 ಲಕ್ಷ ಕೋಟಿ ರೂಪಾಯಿಯಿಂದ 415 ಲಕ್ಷ ಕೋಟಿ ರೂಪಾಯಿಗೆ ಕುಸಿದಿದೆ. ಯುದ್ಧದ ಭೀತಿಯ ಹಿನ್ನೆಲೆಯಲ್ಲಿ ಷೇರುಪೇಟೆ ಕುಸಿತ ಕಾಣುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.
ಯುದ್ಧದ ಭೀತಿಯ ಹಿನ್ನೆಲೆಯಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಹೂಡಿಕೆಯನ್ನು ಹಿಂಪಡೆಯುತ್ತಿದ್ದಾರೆ. ಇದೇ ಕಾರಣಕ್ಕಾಗಿ ಷೇರುಪೇಟೆಯಲ್ಲಿ ತಲ್ಲಣ ಶುರುವಾಗಿದೆ ಎಂದು ತಿಳಿದುಬಂದಿದೆ. ಸಂಘರ್ಷ ತಣ್ಣಗಾಗುವವರೆಗೂ ಡಿ-ಸ್ಟ್ರೀಟ್ ನಲ್ಲಿ ಕೂಡ ಉದ್ವಿಗ್ನತೆ ಇರಲಿದೆ ಎಂದು ಪರಿಣತರು ಎಚ್ಚರಿಸಿದ್ದಾರೆ.
ಇದಕ್ಕೂ ಮೊದಲು ಕೂಡ ಭೌಗೋಳಿಕ ರಾಜಕೀಯ ಸಂಘರ್ಷದಿಂದಾಗಿ ಭಾರತದ ಷೇರುಪೇಟೆ ಕುಸಿತ ಕಂಡಿತ್ತು. ಅದರಲ್ಲೂ, ಷ್ಯಾ-ಉಕ್ರೇನ್, ಇಸ್ರೇಲ್-ಪ್ಯಾಲೇಸ್ತೀನ್ ಸಂಘರ್ಷದ ಹಿನ್ನೆಲೆಯಲ್ಲಿ ಕುಸಿತವುಂಟಾಗಿತ್ತು. ಅಮೆರಿಕವು ಭಾರತ ಸೇರಿ ಹಲವು ದೇಶಗಳ ವಿರುದ್ಧ ಸುಂಕದ ಸಮರ ಸಾರಿದ್ದ ಕಾರಣಕ್ಕಾಗಿಯೂ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಹೆಚ್ಚಾಗಿತ್ತು. ಇದಾದ ಬಳಿಕ ಭಾರತದ ಮಾರುಕಟ್ಟೆಯು ಸುಧಾರಣೆ ಕಂಡಿತ್ತು. ಈಗ ಭಾರತ-ಪಾಕ್ ಸಂಘರ್ಷದಿಂದಾಗಿ ಮತ್ತೆ ಕುಸಿತದ ಹಾದಿ ಹಿಡಿದಿದೆ.