ನವದೆಹಲಿ: ಹರ್ಯಾಣದ ಬಿಜೆಪಿ ಸರ್ಕಾರವು ದೆಹಲಿಯ ಜನರು ಕುಡಿಯುವ ಯುಮನಾ ನದಿಗೆ ವಿಷ ಬೆರೆಸಿದೆ ಎಂದು ಹೇಳಿಕೆ ನೀಡಿದ್ದ ಆಮ್ ಆದ್ಮಿ ಪಾರ್ಟಿ (AAP) ನಾಯಕ, ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಹರ್ಯಾಣದ ಕುರುಕ್ಷೇತ್ರ ಜಿಲ್ಲೆಯಲ್ಲಿ ಪ್ರಕರಣ ದಾಖಲಾಗಿದೆ.
ದೆಹಲಿಯ ಮಾಜಿ ಮುಖ್ಯಮಂತ್ರಿ ಹಾಗೂ ಆಪ್ ಕಾರ್ಯಕರ್ತರ ವಿರುದ್ಧ ವಕೀಲ ಜಗ್ಮೋಹನ್ ಮಂಚಂಡಾ (Jagmohan Manchanda) ಅವರು ದೂರು ನೀಡಿದ್ದಾರೆ. ಅದರಂತೆ, ಶಹಾಬಾದ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 192 (ಗಲಭೆ ಪ್ರಚೋದಿಸುವ ಉದ್ದೇಶ), 196 (1) (ಧರ್ಮ ಅಥವಾ ಜಾತಿ ಆಧಾರದ ಮೇಲೆ ವಿಭಜನೆ ಉಂಟುಮಾಡುವುದು) ಮತ್ತು 299 (ಯಾವುದೇ ಧರ್ಮ ಅಥವಾ ಅದರ ನಂಬಿಕೆಗಳನ್ನು ಅಪಮಾನಿಸುವ ಉದ್ದೇಶಪೂರ್ವಕ ಕೃತ್ಯ) ಸೆಕ್ಷನ್‌ಗಳಡಿ ಕೇಜ್ರಿವಾಲ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕೇಜ್ರಿವಾಲ್ ಮತ್ತು ಆಪ್ ನಾಯಕರು ಚುನಾವಣೆ ವೇಳೆ ಜನರ ಹಾದಿ ತಪ್ಪಿಸಲು ಮತ್ತು ತಮ್ಮತ್ತ ಮತಗಳನ್ನು ಸೆಳೆಯಲು ಸುಳ್ಳು ಮತ್ತು ದ್ವೇಷಪೂರಿತ ಹೇಳಿಕೆಗಳನ್ನು ನೀಡಿದ್ದಾರೆ ಎಂದು ದೂರುದಾರ ಆರೋಪಿಸಿದ್ದಾರೆ.
ಕೇಜ್ರಿವಾಲ್ ಹೇಳಿದ್ದೇನು?
ದೆಹಲಿ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಕೇಜ್ರಿವಾಲ್ ಅವರು, ಯಮುನಾ ನದಿ ಕಲುಷಿತಗೊಳ್ಳಲು ಬಿಜೆಪಿಯೇ ಕಾರಣ. ಹರ್ಯಾಣದ ಬಿಜೆಪಿ ಸರ್ಕಾರವು ವಿಷಕಾರಿ ಕೈಗಾರಿಕಾ ತ್ಯಾಜ್ಯವನ್ನು ಯಮುನೆಗೆ ಹರಿಸುತ್ತಿದೆ. ದೆಹಲಿಯ ಜನರನ್ನು ಕೊಲ್ಲುವ ಉದ್ದೇಶದಿಂದ ಯಮುನಾ ನದಿಯಲ್ಲಿ ವಿಷ ಸೇರಿಸುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದರು.
ಈ ಹೇಳಿಕೆಗೆ ಭಾರೀ ಆಕ್ಷೇಪ ವ್ಯಕ್ತವಾಗಿತ್ತು. ಚುನಾವಣಾ ಆಯೋಗ ಕೂಡ ಕೇಜ್ರಿವಾಲ್‌ರಿಂದ ಈ ಕುರಿತು ವಿವರಣೆ ಕೇಳಿತ್ತು. ಅಲ್ಲದೆ ಕೇಜ್ರಿವಾಲ್ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಬಿಜೆಪಿ, ಕೇಜ್ರಿವಾಲ್ ಜನರಲ್ಲಿ ಭಯ ಹಬ್ಬಿಸುತ್ತಿದ್ದಾರೆ ಎಂದು ಕಿಡಿಕಾರಿತ್ತು. ಇದರ ಮಧ್ಯೆಯೇ, ಹರ್ಯಾಣ ಮುಖ್ಯಮಂತ್ರಿ ಸೈನಿ ಅವರು ಯಮುನಾ ನದಿಯ ನೀರನ್ನು ಕುಡಿಯುವ ಮೂಲಕ ಕೇಜ್ರಿವಾಲ್ ಗೆ ಸಡ್ಡು ಹೊಡೆದಿದ್ದರು.