ಬೆಂಗಳೂರು : ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ನೌಕರರು ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮೇ 20ರಿಂದ ನಾಲ್ಕು ದಿನಗಳ ಸಾಂಕೇತಿಕ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಈ ಹೋರಾಟಕ್ಕೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (CITU) ಕೂಡ ಬೆಂಬಲ ವ್ಯಕ್ತಪಡಿಸಿದೆ.
ಸಿಐಟಿಯು ರಾಜ್ಯ ಸಮಿತಿಯ ಪ್ರಕಟಣೆಯ ಪ್ರಕಾರ, ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ, ಕೆಕೆಆರ್‌ಟಿಸಿ ಹಾಗೂ ಬಿಎಂಟಿಸಿ ನೌಕರರು ಕಳೆದ ಹಲವು ವರ್ಷಗಳಿಂದ ವೇತನ ಪರಿಷ್ಕರಣೆ, ಬಾಕಿ ಇರುವ 38 ತಿಂಗಳ ಅರಿಯರ್ಸ್ ಪಾವತಿ ಸೇರಿದಂತೆ ಹಲವು ಸಮಸ್ಯೆಗಳ ಕುರಿತು ಸರ್ಕಾರದ ಗಮನ ಸೆಳೆದರೂ ಪರಿಹಾರ ದೊರಕಿಲ್ಲ ಎಂದು ಆರೋಪಿಸಲಾಗಿದೆ.
2020 ಜನವರಿ 1ರಿಂದ 2023 ಫೆಬ್ರವರಿ 28ರವರೆಗೆ ಬಾಕಿ ಇರುವ 38 ತಿಂಗಳ ವೇತನ ಬಾಕಿಯನ್ನು 2024 ಜನವರಿಯಿಂದ 2025 ಏಪ್ರಿಲ್ ವರೆಗೆ ಕೇವಲ 15 ತಿಂಗಳ ಕಂತುಗಳಲ್ಲಿ ಪಾವತಿಸಲಾಗಿದ್ದು, ಇನ್ನೂ 12 ತಿಂಗಳ ಬಾಕಿ ಉಳಿದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದಲ್ಲದೆ, ಸರ್ಕಾರವು ಕೇವಲ 12.5 ಶೇಕಡಾ ವೇತನ ಹೆಚ್ಚಳ ಘೋಷಿಸಿರುವುದನ್ನು ನೌಕರರು ತಿರಸ್ಕರಿಸಿದ್ದು, ಕನಿಷ್ಠ 25 ಶೇಕಡಾ ವೇತನ ಪರಿಷ್ಕರಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಸಿಐಟಿಯು ನಾಯಕರು ಮಾತನಾಡಿ, ಸಾರಿಗೆ ನೌಕರರು ದಿನನಿತ್ಯ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ಅವರ ನ್ಯಾಯಸಮ್ಮತ ಬೇಡಿಕೆಗಳನ್ನು ಸರ್ಕಾರ ತಕ್ಷಣ ಈಡೇರಿಸಬೇಕು ಎಂದು ಆಗ್ರಹಿಸಿದ್ಧಾರೆ. ಸುದ್ದಿಗೋಷ್ಠಿಯಲ್ಲಿ ಪ್ರಧಾನಕಾರ್ಯದರ್ಶಿ ಎಸ್ ವರಲಕ್ಷ್ಮಿ, ರೇವಪ್ಪ, ಮಂಜುನಾಥ ಎಚ್.ಎಸ್, ರಾಘವೇಂದ್ರ ಬಿ.ವಿ, ಗಂಡಸಿ ಸದಾನಂದ ಸ್ವಾಮಿ ಉಪಸ್ಥಿತರಿದ್ದರು. ಇನ್ನು ಮೇ 20ರಿಂದ ಆರಂಭವಾಗುವ ಈ ಪ್ರತಿಭಟನೆಗೆ ರಾಜ್ಯದ ವಿವಿಧ ಕಾರ್ಮಿಕ ಹಾಗೂ ಪ್ರಗತಿಪರ ಸಂಘಟನೆಗಳು ಬೆಂಬಲ ಸೂಚಿಸಿರುವುದಾಗಿ ತಿಳಿದುಬಂದಿದೆ.
ಮುಖ್ಯ ಬೇಡಿಕೆಗಳು:
2024 ಜನವರಿ 1ರಿಂದ ಅನ್ವಯವಾಗುವಂತೆ 25% ವೇತನ ಹೆಚ್ಚಳ ಜಾರಿಗೆ ತರಬೇಕು, ಬಾಕಿ ಇರುವ 38 ತಿಂಗಳ ಅರಿಯರ್ಸ್ ಪಾವತಿಸಬೇಕು. ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ, ಕೆಕೆಆರ್‌ಟಿಸಿ ಹಾಗೂ ಬಿಎಂಟಿಸಿ ನೌಕರರಿಗೆ ಸಮಾನ ವೇತನ ಹಾಗೂ ಸೌಲಭ್ಯಗಳನ್ನು ಕಲ್ಪಿಸಬೇಕು.
ಇದನ್ನೂ ಓದಿ : ರಾಜ್ಯದಲ್ಲಿ IAS ಅಧಿಕಾರಿಗಳ ಮಹತ್ವದ ವರ್ಗಾವಣೆ – ಚಿಕ್ಕಮಗಳೂರು ಜಿಲ್ಲೆಗೆ ಹೊಸ ಡಿಸಿ ನೇಮಕ



















