ಉಡುಪಿ : ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ದೇವರಿಗಿಂತಲೂ ಉನ್ನತ ಸ್ಥಾನವಿದೆ. ಇದಕ್ಕೆ ಸಾಕ್ಷಿ ಎಂಬಂತೆ, ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ಅವರು ಶಿರೂರು ಸರ್ಕಾರಿ ಪದವಿಪೂರ್ವ ಕಾಲೇಜಿನ ಅಭೂತಪೂರ್ವ ಯಶಸ್ಸಿನ ರೂವಾರಿಯಾದ ಪ್ರಾಂಶುಪಾಲೆ ಜಯಂತಿ ಅವರ ಕಾಲಿಗೆ ಬಿದ್ದು ನಮಸ್ಕರಿಸಿ ಭಾವುಕರಾಗಿದ್ದಾರೆ.

ಕಳೆದ ವರ್ಷ ಕೇವಲ ಶೇ.35ರಷ್ಟು ಫಲಿತಾಂಶ ಪಡೆದು ಇಡೀ ಕ್ಷೇತ್ರದ ಶೈಕ್ಷಣಿಕ ಹಿನ್ನಡೆಗೆ ಕಾರಣವಾಗಿದ್ದ ಶಿರೂರು ಸರ್ಕಾರಿ ಪದವಿ ಪೂರ್ವ ಕಾಲೇಜು SSLCಯಲ್ಲಿ ಈ ಬಾರಿ ಶೇ. 94%ರಷ್ಟು ಫಲಿತಾಂಶ ಪಡೆಯುವ ಮೂಲಕ ಪವಾಡವನ್ನೇ ಸೃಷ್ಟಿಸಿದೆ.
ಕಳೆದ ಬಾರಿ ಫಲಿತಾಂಶ ಕುಸಿದಾಗ ಶಾಸಕ ಗುರುರಾಜ್ ಗಂಟಿಹೊಳೆ ಅವರು ಶಾಲಾ ಪ್ರಾಂಶುಪಾಲರನ್ನು ಹಾಗೂ ಶಿಕ್ಷಕರನ್ನು ಕಟು ಮಾತುಗಳಿಂದ ತರಾಟೆಗೆ ತೆಗೆದುಕೊಂಡಿದ್ದರು. ಕ್ಷೇತ್ರದ ಶೈಕ್ಷಣಿಕ ಗುಣಮಟ್ಟ ಕುಸಿಯಬಾರದೆಂಬ ಕಳಕಳಿಯಿಂದ ಅಂದು ಅವರು ಆಡಿದ್ದ ಮಾತುಗಳು ಇಂದು ಮುತ್ತುಗಳಾಗಿವೆ.

ಅಂದು ಕಠಿಣವಾಗಿದ್ದ ಶಾಸಕರು, ಇಂದು ಶಿಕ್ಷಕರ ತ್ಯಾಗ ಮತ್ತು ಶ್ರಮವನ್ನು ಕಂಡು ವೇದಿಕೆಯಲ್ಲೇ ಭಾವುಕರಾಗಿ, ಅವರ ಚರಣಗಳಿಗೆ ಶಿರಬಾಗುವ ಮೂಲಕ ನೈತಿಕ ನಾಯಕತ್ವದ ಹೊಸ ಆಯಾಮವನ್ನು ತೋರಿದ್ದಾರೆ.

ಈ ಯಶಸ್ಸಿನ ಹಿಂದೆ ಪ್ರಾಂಶುಪಾಲೆ ಜಯಂತಿ ಅವರ ಅಪ್ರತಿಮ ತ್ಯಾಗವಿದೆ. ಶಾಲೆಯ ಫಲಿತಾಂಶ ಸುಧಾರಿಸಲೇಬೇಕೆಂಬ ಛಲ ತೊಟ್ಟ ಅವರು, ಸ್ವಂತ ಮನೆ ಬಿಟ್ಟು ಶಾಲೆಯ ಹತ್ತಿರವೇ ಬಾಡಿಗೆ ಮನೆ ಮಾಡಿಕೊಂಡಿದ್ದರು. ಹಗಲಿರುಳು ಎನ್ನದೆ ಮಕ್ಕಳಿಗೆ ವಿಶೇಷ ತರಗತಿಗಳನ್ನು ನಡೆಸಿ, ಪ್ರತಿಯೊಬ್ಬ ವಿದ್ಯಾರ್ಥಿಯನ್ನೂ ತನ್ನ ಸ್ವಂತ ಮಗುವಿನಂತೆ ಪ್ರೀತಿಯಿಂದ ಸಾಕಿ ಸಲಹಿದ್ದಕ್ಕೆ ಇಂದು ಶೇ. 94ರಷ್ಟು ರಿಸಲ್ಟ್ ಬಂದಿದೆ. ಶಾಸಕರ ಕಾಳಜಿ ಹಾಗೂ ಶಿಕ್ಷಕರ ಮುತುವರ್ಜಿಯಿಂದ ಸರ್ಕಾರಿ ಶಾಲೆ ಉತ್ತಮ ಫಲಿತಾಂಶ ಪಡೆದಿದ್ದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಇದನ್ನೂ ಓದಿ : ‘ಆನ್‌ಲೈನ್ ಮದ್ಯ ಮಾರಾಟ’ಕ್ಕೆ KRS ಪಕ್ಷ ತೀವ್ರ ವಿರೋಧ – ರಾಜ್ಯಾದ್ಯಂತ ಜನಾಂದೋಲನಕ್ಕೆ ಸಜ್ಜು!



















