ಹೈದರಾಬಾದ್: ಶ್ರೀಶೈಲಂ ಎಡದಂಡೆ ಕಾಲುವೆಯ (Srisailam Left Bank Canal) ನಿರ್ಮಾಣ ಹಂತದಲ್ಲಿದ್ದ ಸುರಂಗದಲ್ಲಿ ಮೇಲ್ಛಾವಣಿ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಣಾ ಕಾರ್ಯಾಚರಣೆ ಪ್ರಾರಂಭವಾಗಿ 10 ದಿನ ಕಳೆದರೂ 8 ಕಾರ್ಮಿಕರು ಇನ್ನೂ ಪತ್ತೆಯಾಗಿಲ್ಲ.
ದೋಮಲಪೆಂಟಾ ಬಳಿಯ ಶ್ರೀಶೈಲಂ ಆಣೆಕಟ್ಟಿನ ಹಿಂಭಾಗದ ಸುರಂಗದಲ್ಲಿ ಸೋರಿಕೆ ಉಂಟಾಗಿದ್ದು, ಸೋರಿಕೆ ಸರಿಪಡಿಸಲು ಕಾರ್ಮಿಕರು ಒಳಗೆ ಹೋದಾಗ ಛಾವಣಿ ಕುಸಿದಿತ್ತು. ಈ ಸಂದರ್ಭದಲ್ಲಿ 8 ಜನ ಕಾರ್ಮಿಕರು ಸಿಲುಕಿದ್ದರು. ಈಗಾಗಲೇ 48 ಕಾರ್ಮಿಕರನ್ನು ರಕ್ಷಿಸಲಾಗಿದ್ದು, ಇನ್ನುಳಿದ 8 ಜನ ಕಾರ್ಮಿಕರು ಮಾತ್ರ ಇದುವರೆಗೂ ಪತ್ತೆಯಾಗಿಲ್ಲ.
ಈ ಕುರಿತು ಎನ್‌ಡಿಆರ್‌ಎಫ್ ಕಮಾಂಡೆಂಟ್ ವಿವಿಎನ್ ಪ್ರಸನ್ನ ಕುಮಾರ್ ಮಾತನಾಡಿ, ಸುರಂಗ ಕುಸಿತದ ಸ್ಥಳದಲ್ಲಿ ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್ ಸೇರಿದಂತೆ ಉತ್ತರಾಖಂಡದ ರ‍್ಯಾಟ್ ಮೈನರ್, 300 ಸಿಬ್ಬಂದಿ ಜೊತೆಗೂಡಿ ರಕ್ಷಣಾ ಕಾರ್ಯಾಚರಣೆ ನಡೆಸಿವೆ. ಕಳೆದ 10 ದಿನಗಳಿಂದ ಹಗಲು, ರಾತ್ರಿ ಕಾರ್ಯಾಚರಣೆ ನಡೆದಿದ್ದು, ಯಾವುದೇ ಕಾರ್ಮಿಕರು ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.