ಗುವಾಹಟಿ: ಲವ್ ಜಿಹಾದ್ (Love Jihad) ಪ್ರಕರಣಕ್ಕೆ ಜೀವಾವಧಿ ಶಿಕ್ಷೆ ವಿಧಿಸುವ ಕಾನೂನನ್ನು ನಾವು ಶೀಘ್ರದಲ್ಲಿಯೇ ಜಾರಿಗೊಳಿಸುತ್ತೇವೆ ಎಂದು ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಹೇಳಿದ್ದಾರೆ.
ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಈ ಕುರಿತು ಮಾತನಾಡಿದ ಅವರು, ಅಸ್ಸಾಂನಲ್ಲಿ ಲವ್ ಜಿಹಾದ್ ವಿರುದ್ಧ ಕಾನೂನು ತರಲು ನಮ್ಮ ಸರ್ಕಾರ ಮುಂದಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ, ಶೀಘ್ರದಲ್ಲೇ ಹೊಸ ವಸತಿ ನೀತಿಯನ್ನು ನಾವು ಜಾರಿಗೆ ತರುತ್ತೇವೆ. ಈ ಮೂಲಕ ಅಸ್ಸಾಂನಲ್ಲಿ ಜನಿಸಿದವರು ಮಾತ್ರ ರಾಜ್ಯ ಸರ್ಕಾರಿ ಉದ್ಯೋಗಗಳಿಗೆ ಅರ್ಹರಾಗಿರುತ್ತಾರೆ. ಅಲ್ಲದೆ ಮುಸ್ಲಿಂ ವ್ಯಕ್ತಿಯು ಹಿಂದೂಗಳ ಅಥವಾ ಹಿಂದೂ ವ್ಯಕ್ತಿ ಮುಸ್ಲಿಂರ ಭೂಮಿಯನ್ನು ಖರೀದಿಸಲು ಬಯಸಿದರೆ ಮೊದಲು ಸರ್ಕಾರದ ಅನುಮತಿ ಪಡೆಯಬೇಕಾಗುತ್ತದೆ. ಈ ತಿಂಗಳ ಕೊನೆಯಲ್ಲಿ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಈ ಹೊಸ ಕಾನೂನು ಜಾರಿಗೆ ಬರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಬಲವಂತದ ಮತಾಂತರದ ವಿರುದ್ಧ ಕಾನೂನುಗಳಿದ್ದರೂ, ಶಿಕ್ಷೆಯ ನಿಬಂಧನೆಗಳನ್ನು ಇನ್ನಷ್ಟು ಕಠಿಣಗೊಳಿಸಲು ಯೋಜನೆಗಳು ಜಾರಿಯಲ್ಲಿವೆ. ಲವ್ ಜಿಹಾದ್ ವಿರುದ್ಧ ರಾಜ್ಯದಲ್ಲಿ ಮೊದಲು ಉತ್ತರ ಪ್ರದೇಶ ಕಾನೂನು ರೂಪಿಸಿತ್ತು.