ಬ್ರಿಸ್ಬೇನ್ : ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಮುಂಬರುವ 2026ರ ಮಹಿಳಾ ಟಿ20 ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು 15 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ತಂಡದ ನಾಯಕಿಯಾಗಿ ಸ್ಟಾರ್ ಆಲ್‌ರೌಂಡರ್ ಸೋಫಿ ಮೊಲಿನೆಕ್ಸ್ ಅವರನ್ನು ನೇಮಿಸಲಾಗಿದ್ದು, ಫಿಟ್‌ನೆಸ್ ಪರೀಕ್ಷೆಯಲ್ಲಿ ಅವರು ಯಶಸ್ವಿಯಾಗಿ ತೇರ್ಗಡೆಯಾಗಿದ್ದಾರೆ.
ಈ ಬಾರಿಯ ತಂಡದ ಆಯ್ಕೆಯಲ್ಲಿ ಆಸ್ಟ್ರೇಲಿಯಾ ಕೆಲವು ಅಚ್ಚರಿಯ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ಪ್ರಮುಖ ವೇಗದ ಬೌಲರ್ ಡಾರ್ಸಿ ಬ್ರೌನ್ ಅವರನ್ನು ತಂಡದಿಂದ ಕೈಬಿಟ್ಟಿದೆ. 2024ರ ವಿಶ್ವಕಪ್‌ನಲ್ಲಿ ಸೆಮಿಫೈನಲ್ ಹಂತದಲ್ಲೇ ಆಘಾತಕಾರಿಯಾಗಿ ನಿರ್ಗಮಿಸಿದ್ದ ಆರು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ, ಈ ಬಾರಿ ಸಂಪೂರ್ಣ ಹೊಸ ನಾಯಕತ್ವದೊಂದಿಗೆ ಕಣಕ್ಕಿಳಿಯಲು ಸಜ್ಜಾಗಿ ನಿಂತಿದೆ.
ನಾಯಕತ್ವದ ಹೊಣೆ ಹೊತ್ತ ಸೋಫಿ ಮೊಲಿನೆಕ್ಸ್ ಹಾಗೂ ಉಪನಾಯಕಿಯರು
ಈ ವರ್ಷದ ಜನವರಿಯಲ್ಲಿ ದಿಗ್ಗಜ ಆಟಗಾರ್ತಿ ಅಲಿಸ್ಸಾ ಹೀಲಿ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ, 28 ವರ್ಷದ ಸೋಫಿ ಮೊಲಿನೆಕ್ಸ್ ಅವರಿಗೆ ತಂಡದ ನಾಯಕತ್ವವನ್ನು ವಹಿಸಲಾಗಿತ್ತು. ವೆಸ್ಟ್ ಇಂಡೀಸ್ ಪ್ರವಾಸಕ್ಕೂ ಮುನ್ನ ಬೆನ್ನುನೋವಿನ ಸಮಸ್ಯೆಗೆ ತುತ್ತಾಗಿದ್ದ ಅವರು ಆ ಸರಣಿಯಲ್ಲಿ ಕೇವಲ ಬ್ಯಾಟರ್ ಆಗಿ ಮಾತ್ರ ಕಾಣಿಸಿಕೊಂಡಿದ್ದರು. ಇದು ವಿಶ್ವಕಪ್ ಹೊತ್ತಿಗೆ ಅವರ ಫಿಟ್‌ನೆಸ್ ಹೇಗಿರಲಿದೆ ಎಂಬ ಬಗ್ಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿತ್ತು. ಆದರೆ, ಇದೀಗ ಅವರು ಸಂಪೂರ್ಣ ಫಿಟ್ ಆಗಿದ್ದು, ತಂಡವನ್ನು ಮುನ್ನಡೆಸಲು ತಯಾರಾಗಿದ್ದಾರೆ. “ಸೋಫಿ ಈಗಾಗಲೇ ನಾಯಕಿಯಾಗಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ ಹಾಗೂ ಕಳೆದ ಕೆಲವು ಸರಣಿಗಳಲ್ಲಿ ಆಟಗಾರ್ತಿಯರೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದಾರೆ. ಅವರ ನಾಯಕತ್ವದಲ್ಲಿ ತಂಡವು ಅದ್ಭುತ ಸಾಧನೆ ಮಾಡಲಿದೆ ಎಂಬ ವಿಶ್ವಾಸ ನಮಗಿದೆ” ಎಂದು ರಾಷ್ಟ್ರೀಯ ಆಯ್ಕೆಗಾರ ಶಾನ್ ಫ್ಲೆಗ್ಲರ್ ಸ್ಪಷ್ಟಪಡಿಸಿದ್ದಾರೆ. ಇನ್ನು ತಂಡದ ಉಪನಾಯಕಿಯರಾಗಿ ಆಶ್ ಗಾರ್ಡ್ನರ್ ಮತ್ತು ತಾಲಿಯಾ ಮೆಕ್‌ಗ್ರಾತ್ ಕಾರ್ಯನಿರ್ವಹಿಸಲಿದ್ದಾರೆ.
ವೇಗಿ ಡಾರ್ಸಿ ಬ್ರೌನ್‌ಗೆ ಕೊಕ್, ಲ್ಯೂಸಿ ಹ್ಯಾಮಿಲ್ಟನ್‌ಗೆ ಒಲಿದ ಅವಕಾಶ
ಮಹಿಳಾ ಕ್ರಿಕೆಟ್‌ನ ಅತ್ಯಂತ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ಡಾರ್ಸಿ ಬ್ರೌನ್ ಅವರನ್ನು ಕೈಬಿಟ್ಟಿರುವುದು ಕ್ರಿಕೆಟ್ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಇಂಗ್ಲೆಂಡ್‌ನ ಹವಾಮಾನ ಹಾಗೂ ಪಿಚ್‌ಗಳು ಸ್ವಿಂಗ್ ಮತ್ತು ಸೀಮ್‌ಗೆ ಹೆಚ್ಚು ನೆರವಾಗಲಿವೆ ಎಂಬ ಲೆಕ್ಕಾಚಾರದಲ್ಲಿ, ಕೇವಲ ವೇಗವನ್ನೇ ನೆಚ್ಚಿಕೊಳ್ಳುವ ಬದಲು ವೈವಿಧ್ಯಮಯ ಬೌಲಿಂಗ್ ದಾಳಿಗೆ ಆಯ್ಕೆ ಸಮಿತಿ ಹೆಚ್ಚು ಆದ್ಯತೆ ನೀಡಿದೆ. ಹೀಗಾಗಿ ಎಡಗೈ ವೇಗಿ ಲ್ಯೂಸಿ ಹ್ಯಾಮಿಲ್ಟನ್ ಅವರಿಗೆ ಮೊದಲ ಬಾರಿಗೆ ಐಸಿಸಿ ಟೂರ್ನಿಯಲ್ಲಿ ಆಡುವ ಅವಕಾಶ ಒಲಿದುಬಂದಿದೆ. ಮೆಗಾನ್ ಶುಟ್, ಕಿಮ್ ಗಾರ್ತ್ ಹಾಗೂ ಅಲಾನಾ ಕಿಂಗ್ ಅವರಂತಹ ಘಟಾನುಘಟಿ ಅನುಭವಿಗಳ ಜೊತೆ ಲ್ಯೂಸಿ ಅವರ ಎಡಗೈ ಬೌಲಿಂಗ್ ದಾಳಿಯು ಆಸ್ಟ್ರೇಲಿಯಾ ತಂಡಕ್ಕೆ ಹೆಚ್ಚಿನ ಬಲ ತುಂಬಲಿದೆ ಎಂದು ನಿರೀಕ್ಷಿಸಲಾಗಿದೆ.
ಬಲಿಷ್ಠ ಬ್ಯಾಟಿಂಗ್ ಪಡೆಯೊಂದಿಗೆ ಕಣಕ್ಕೆ
ವೆಸ್ಟ್ ಇಂಡೀಸ್ ಪ್ರವಾಸದಿಂದ ಹೊರಗುಳಿದಿದ್ದ ಪ್ರಮುಖ ಆಲ್‌ರೌಂಡರ್‌ಗಳಾದ ಅನಾಬೆಲ್ ಸದರ್‌ಲ್ಯಾಂಡ್ ಮತ್ತು ಗ್ರೇಸ್ ಹ್ಯಾರಿಸ್ ತಂಡಕ್ಕೆ ಮರಳಿದ್ದು, ತಂಡದ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳಿಗೆ ಮತ್ತಷ್ಟು ಶಕ್ತಿ ತುಂಬಿದ್ದಾರೆ. ಇವರ ಜೊತೆಗೆ ವಿಶ್ವದ ಶ್ರೇಷ್ಠ ಆಟಗಾರ್ತಿಯರಾದ ಎಲ್ಲಿಸ್ ಪೆರ್ರಿ ಹಾಗೂ ಬೆತ್ ಮೂನಿ ಅವರ ಅಪಾರ ಅನುಭವ ಆಸ್ಟ್ರೇಲಿಯಾ ತಂಡದ ಬೆನ್ನೆಲುಬಾಗಿ ನಿಲ್ಲಲಿದೆ. ಯುವ ಪ್ರತಿಭೆಗಳಾದ ಫೋಬೆ ಲಿಚ್‌ಫೀಲ್ಡ್ ಮತ್ತು ಜಾರ್ಜಿಯಾ ವೋಲ್ ಕೂಡ ಬ್ಯಾಟಿಂಗ್ ವಿಭಾಗಕ್ಕೆ ಹೊಸ ಹುರುಪು ತರಲಿದ್ದಾರೆ.
ಜೂನ್ 13ರಂದು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಕದನ
ವಿಶ್ವಕಪ್ ಅಭಿಯಾನವನ್ನು ಅಧಿಕೃತವಾಗಿ ಆರಂಭಿಸುವ ಮುನ್ನ ಆಸ್ಟ್ರೇಲಿಯಾ ತಂಡವು ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಸಿದ್ಧತಾ (ವಾರ್ಮ್-ಅಪ್) ಪಂದ್ಯಗಳನ್ನು ಆಡಲಿದೆ. ಆ ಬಳಿಕ ಜೂನ್ 13ರಂದು ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆಯಲಿರುವ ತನ್ನ ಮೊದಲ ಅಧಿಕೃತ ಪಂದ್ಯದಲ್ಲಿ ಬಲಿಷ್ಠ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸುವ ಮೂಲಕ ವಿಶ್ವಕಪ್ ಬೇಟೆಗೆ ಚಾಲನೆ ನೀಡಲಿದೆ.
ವಿಶ್ವಕಪ್‌ಗಾಗಿ ಪ್ರಕಟಿಸಲಾದ ಆಸ್ಟ್ರೇಲಿಯಾ ತಂಡ:
ಸೋಫಿ ಮೊಲಿನೆಕ್ಸ್ (ನಾಯಕಿ), ಆಶ್ ಗಾರ್ಡ್ನರ್, ತಾಲಿಯಾ ಮೆಕ್‌ಗ್ರಾತ್, ನಿಕೋಲಾ ಕ್ಯಾರಿ, ಕಿಮ್ ಗಾರ್ತ್, ಲ್ಯೂಸಿ ಹ್ಯಾಮಿಲ್ಟನ್, ಗ್ರೇಸ್ ಹ್ಯಾರಿಸ್, ಅಲಾನಾ ಕಿಂಗ್, ಫೋಬೆ ಲಿಚ್‌ಫೀಲ್ಡ್, ಬೆತ್ ಮೂನಿ, ಎಲ್ಲಿಸ್ ಪೆರ್ರಿ, ಮೆಗಾನ್ ಶುಟ್, ಅನಾಬೆಲ್ ಸದರ್‌ಲ್ಯಾಂಡ್, ಜಾರ್ಜಿಯಾ ವೋಲ್ ಮತ್ತು ಜಾರ್ಜಿಯಾ ವೇರ್‌ಹ್ಯಾಮ್. (ಮೀಸಲು ಆಟಗಾರ್ತಿ: ತಾಲಿಯಾ ವಿಲ್ಸನ್).
ಇದನ್ನೂ ಓದಿ ; ಬ್ಯಾಟಿಂಗ್ ಅಬ್ಬರದ IPLನಲ್ಲಿ ಬೌಲಿಂಗ್ ಮೂಲಕ ಪ್ಲೇಆಫ್‌ಗೆ ಲಗ್ಗೆ – ಇದು GT ಬೌಲರ್‌ಗಳ ಕಮಾಲ್!



















