ಬೆಂಗಳೂರು : ಭಾರತ ತಂಡದ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ(Smriti Mandhana) 2024ರ ವರ್ಷದ ಮಹಿಳಾ ಏಕದಿನ ಕ್ರಿಕೆಟರ್ ಪ್ರಶಸ್ತಿಗೆ ತಮ್ಮದಾಗಿಸಿಕೊಂಡಿದ್ದಾರೆ. ಇದು ಎರಡನೇ ಬಾರಿಗೆ ಮಂಧಾನಗೆ ಒಲಿದ ಐಸಿಸಿ ಪ್ರಶಸ್ತಿಯಾಗಿದೆ. ಎಡಗೈ ಬ್ಯಾಟರ್ ಕಳೆದ ವರ್ಷದಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದರು. ಅಬ್ಬರದ ಬ್ಯಾಟಿಂಗ್ ಜತೆಗೆ ಭಾರತದ ಹಲವಾರು ಗೆಲುವುಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಸ್ಮೃತಿ ಮಂಧಾನ ಮೊದಲ ಬಾರಿಗೆ 2018ರಲ್ಲಿ ವರ್ಷದ ಅತ್ಯುತ್ತಮ ಆಟಗಾರ್ತಿ ಪ್ರಶಸ್ತಿ ಗೆದ್ದುಕೊಂಡಿದ್ದರು. ಇದೀಗ ಮತ್ತೆ ವರ್ಷವೀಡಿ ಉತ್ತಮ ಪ್ರದರ್ಶನ ನೀಡುವ ಮೂಲಕ 2 ಬಾರಿ ಈ ಪ್ರಶಸ್ತಿ ಗೆದ್ದಿದ್ದಾರೆ. ಅಂದ ಹಾಗೆ ಈ ಸಾಧನೆ ಮಾಡಿರುವ ವಿಶ್ವದ 2ನೇ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಭಾರತ ಪರ ಈ ಸಾಧನೆ ಯಾರೂ ಮಾಡಿಲ್ಲ. ಆದರೆ, ನ್ಯೂಜಿಲ್ಯಾಂಡ್‌ನ ಸುಜಿ ಬೇಟ್ಸ್ ಈ ಹಿಂದೆ ಎರಡು ಬಾರಿ ಪ್ರಶಸ್ತಿ ಗೆದ್ದಿದ್ದರು.
ಕಳೆದ ವರ್ಷದ ಪ್ರಶಸ್ತಿ ರೇಸ್ ಸುಲಭವಾಗಿರಲಿಲ್ಲ. ಶ್ರೀಲಂಕಾದ ನಾಯಕಿ ಚಾಮರಿ ಅಟಪಟ್ಟು, ದಕ್ಷಿಣ ಆಫ್ರಿಕಾದ ಲಾರಾ ವೊಲ್ವಾರ್ಡ್ಟ್ ಮತ್ತು ಆಸ್ಟ್ರೇಲಿಯಾದ ಅನ್ನಾಬೆಲ್ ಸದರ್ಲ್ಯಾಂಡ್ ಪಟ್ಟಿಯಲ್ಲಿದ್ದರು. ಅವರಿಬ್ಬರನ್ನು ಹಿಂದಿಕ್ಕಿದ ಸ್ಮೃತಿ ಹಿರಿಮೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಸ್ಮೃತಿ ಮಂಧಾನ ಅವರು 2024ರಲ್ಲಿ 13 ಪಂದ್ಯಗಳಲ್ಲಿ 57.46 ಸರಾಸರಿಯಲ್ಲಿ ನಾಲ್ಕು ಶತಕಗಳು ಸೇರಿದಂತೆ 794 ರನ್ ಗಳಿಸಿದ್ದಾರೆ. ಕಳೆದ ವರ್ಷ 50 ಓವರ್‌ಗಳ ಮಾದರಿಯಲ್ಲಿ ಅವರು ಪ್ರಮುಖ ರನ್ ಗಳಿಸಿದ ಆಟಗಾರ್ತಿಯಾಗಿದ್ದರು. ಮಹಿಳೆಯರ ಏಕದಿನ ಕ್ರಿಕೆಟ್‌ನ ಕ್ಯಾಲೆಂಡರ್ ವರ್ಷದಲ್ಲಿ ನಾಲ್ಕು ಶತಕಗಳನ್ನು ಬಾರಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ದಾಖಲೆಯೂ ಇವರ ಹೆಸರಿನಲ್ಲಿದೆ. ಐಸಿಸಿ 20 ವರ್ಷದ ಮಹಿಳಾ ಕ್ರಿಕೆಟರ್ ಪ್ರಶಸ್ತಿ ರೇಸ್‌ನಲ್ಲಿಯೂ ಸ್ಮೃತಿ ಕಾಣಿಸಿಕೊಂಡಿದ್ದರು. ಆದರೆ T20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ನ್ಯೂಜಿಲೆಂಡ್‌ನ ಅಮೆಲಿಯಾ ಕೆರ್ ಪ್ರಶಸ್ತಿ ಒಲಿಯಿತು.