ಶಿವಮೊಗ್ಗ: ಜಾತಿ ವಿಚಾರದಲ್ಲಿ ಸಿಎಂ ಸಮಾಜಗಳ ನಡುವೆ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದ್ದಾರೆಂದು ಶಿವಮೊಗ್ಗದಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಿಡಿಕಾರಿದ್ದಾರೆ.
ಹಿಂದೂ ಧರ್ಮವನ್ನು ಒಡೆಯುವ ಕೆಲಸವನ್ನು ಸಿಎಂ ಸಿದ್ದರಾಮಯ್ಯನವರು ಮಾಡುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿ ಮಾಡುವ ಕೆಲಸಾನಾ ಇದು ಎಂದು ಸಿಎಂ ವಿರುದ್ಧ ವಿಜಯೇಂದ್ರ ವಾಗ್ದಾಳಿ ನಡೆಸಿದ್ರು. ರಾಜ್ಯದ ಮುಖ್ಯಮಂತ್ರಿ ಆಗಿ ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಬೇಕೇ ಹೊರತು ಹಿಂದೂ ಸಮಾಜವನ್ನು ಒಡೆಯುವ ಕೆಲಸ ಮಾಡುವುದಲ್ಲ. ಬ್ರಿಟಿಷ್ ಆಳ್ವಿಕೆಯನ್ನು ನಾಚಿಸುವಂತೆ, ಟಿಪ್ಪು ಆಳ್ವಿಕೆ, ನಿಜಾಮರ ಆಳ್ವಿಕೆಯನ್ನು ನಾಚಿಸುವಂತೆ ಸಿಎಂ ಸಿದ್ದರಾಮಯ್ಯ ಆಡಳಿತ ನಡೆಸಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ಹಿಂದೂ ಸಮಾಜವನ್ನು ಒಡೆಯುವ ದುಸ್ಸಾಹಸಕ್ಕೆ ಕೈಹಾಕಿದ್ದು ಭಗವಂತ ಇವರಿಗೆ ಒಳ್ಳೆಯದು ಮಾಡಲು ಸಾಧ್ಯವಿಲ್ಲ. 40 ಹೊಸ ಜಾತಿಗಳನ್ನು ಸೃಷ್ಠಿಸಲು ಈ ದೃಷ್ಟರು ಹೊರಟಿದ್ದಾರೆ, ಬಹಳ ನೋವಿನಿಂದ ರಾಜ್ಯ ಬಿಜೆಪಿ ಅಧ್ಯಕ್ಷನಾಗಿ ಅಲ್ಲ ಹಿಂದೂ ಸಮಾಜದ ಕಾರ್ಯಕರ್ತನಾಗಿ ಹೇಳುತ್ತಿದ್ದೇನೆ, ರಾಜ್ಯದ ಮುಖ್ಯಮಂತ್ರಿಗಳಿಗೆ ಇಂತಹ ದುರ್ಬುದ್ದಿ ಬರಬಾರದಾಗಿತ್ತು. ಸಿಎಂ ಸ್ಥಾನದಲ್ಲಿ ಎಷ್ಟು ದಿನ ಇರುತ್ತೀರಾ ಎನ್ನುವ ಮುಖ್ಯ ಅಲ್ಲ, ಮುಂದೆ ಯುವ ಪಿಳಿಗೆಗೆ ಇಂತಹ ಅಯೋಗ್ಯ ಮುಖ್ಯಮಂತ್ರಿ ರಾಜ್ಯ ಪಡೆದುಕೊಂಡಿತ್ತಾ ಎನ್ನುವ ದಿನ ನೀವೇ ತಂದುಕೊಂಡಿದ್ದೀರಾ. ಈಗಲೂ ಕಾಲ ಮಿಂಚಿಲ್ಲ ರಾಜ್ಯದ ಅಭಿವೃದ್ದಿ ಮಾಡಿ ಹಿಂದೂ ಸಮಾಜ ಒಡೆಯುವ ಕೆಲಸ ಮಾಡಬೇಡಿ, ದೇವರು ನಿಮಗೆ ಒಳ್ಳೆಯದು ಮಾಡಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
“ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಜನ ಶಾಪ ಹಾಕುತ್ತಿದ್ದಾರೆ”
ಸಿದ್ದರಾಮಯ್ಯ ಸರ್ಕಾರದ ವಿರುದ್ಧ ರಾಜ್ಯದ ಜನರು ಹಿಡಿ ಶಾಪ ಹಾಕುತ್ತಿದ್ದಾರೆ. ಒಂದಲ್ಲ, ಎರಡಲ್ಲ ಧರ್ಮಸ್ಥಳ ವಿಚಾರದಲ್ಲಿ ಭಕ್ತರ ಭಾವನೆಗೆ ಕೊಡಲಿ ಪೆಟ್ಟು ಕೊಡುವ ದುಷ್ಟ ಕೆಲಸಕ್ಕೆ ಕಾಂಗ್ರೆಸ್ ಸರ್ಕಾರ ಕೈ ಹಾಕಿತ್ತು. ನಾಡದೇವತೆ ಚಾಮುಂಡೇಶ್ವರಿ ವಿಚಾರದಲ್ಲೂ ಗೊಂದಲ ಸೃಷ್ಠಿಸಿ ಹಿಂದೂಗಳಿಗೆ ಅಪಮಾನ ಮಾಡುವ ಕೆಲಸವನ್ನು ಸಿದ್ದರಾಮಯ್ಯ ಸರ್ಕಾರ ಮಾಡಿದೆ. ಗಣಪತಿ ಹಬ್ಬಕ್ಕೂ ಈ ಸರ್ಕಾರ ಕಲ್ಲುಹಾಕುವ ಕೆಲಸ ಮಾಡಿದೆ, ಅನೇಕ ಕಡೆ ಕಡಿವಾಣ ಹಾಕುವ ಮೂಲಕ ಹೊಸ ಹೊಸ ಕಾನೂನು ತಂದು ಗಣಪತಿ ಮೆರವಣಿಗೆ ಕಲ್ಲುಹಾಕುವ ಕೆಲಸ ಕಾಂಗ್ರೆಸ್ ಮಾಡಿದೆ. ಇದಕ್ಕೆ ದುರ್ಬುದ್ದಿ ಎನ್ನದೇ ಬೇರೆ ಏನು ಹೇಳಲು ಸಾಧ್ಯವಿಲ್ಲ. ಜನರು ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬುದ್ಧಿ ಕಲಿಸುತ್ತಾರೆ. ಸಿದ್ದರಾಮಯ್ಯ ಸರ್ಕಾರದಕುತಂತ್ರ, ಷಡ್ಯಂತ್ರಕ್ಕೆ ಯಾರೂ ಬಲಿ ಆಗಬಾರದು ಎಂದು ಕಾಂಗ್ರೆಸ್ ಸರ್ಕಾರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹರಿಹಾಯ್ದಿದ್ದಾರೆ.



















