ಬೆಂಗಳೂರು : ರಾಜ್ಯ ಸರ್ಕಾರಿ ಶಾಲೆಗಳಲ್ಲಿನ ಶೌಚಾಲಯ ನಿರ್ವಹಣೆಗೆ ಅನುದಾನ ಕೊರತೆ ಬಗ್ಗೆ ಮೇಲ್ಮನೆಯಲ್ಲಿ ಚರ್ಚೆ ನಡೆದಿದ್ದು, ರಾಜ್ಯ ಸರ್ಕಾರಿ ಶಾಲೆಗಳಲ್ಲಿನ ಶೌಚಾಲಯಗಳನ್ನು ಶಿಕ್ಷಕರು ತೊಳೆಯಬೇಕೇ ? ಎಂದು ಮೇಲ್ಮನೆ ಸದಸ್ಯರು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಮೇಲ್ಮನೆ ಸದಸ್ಯರಾದ ರಾಮೋಜಿ ಗೌಡ, ಮಧು ಜಿ. ಮಾದೇಗೌಡ, ವಿವೇಕಾನಂದ ಅವರು ವಿಷಯ ಪ್ರಸ್ತಾಪಿಸಿ, ಕಳವಳ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿನ ಶೌಚಾಲಯಗಳ ಶುಚಿತ್ವಕ್ಕೆ ನೀಡಲಾಗುವ ಅನುದಾನ ನಿಷ್ಪ್ರಯೋಜಕವಾಗಿದೆ. ಅನುದಾನವನ್ನು ಹೆಚ್ಚಿಸಿದರೂ ಸುಧಾರಣೆ ಕಷ್ಟವಾಗಿದೆ ಎಂದು ಹೇಳಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳು ಶೌಚಾಲಯ ತೊಳೆಯುವಂತಿಲ್ಲ. ಶಿಕ್ಷಕರಿಗೆ ಬೇರೆ ಕೆಲಸಗಳಿವೆ. ಹೀಗಾಗಿ ಯಾರಾದರೂ ಶಿಕ್ಷಕರ ಮೇಲೆ ಕ್ರಮ ಕೈಗೊಳ್ಳಬೇಕು ಎಂದರೆ ಮಕ್ಕಳ ಕೈಯಲ್ಲಿ ಪೊರಕೆ ನೀಡಿ ಸೋಷಿಯಲ್ ಮೀಡಿಯಾದಲ್ಲಿ ಫೋಟೋಗಳನ್ನು ವೈರಲ್ ಮಾಡಿದರೆ ಸಾಕು. ಸಂಬಂಧಪಟ್ಟ ಶಿಕ್ಷಕರು ಅಮಾನತುಗೊಳ್ಳುತ್ತಾರೆ. ಇಂತಹ ಕಿರುಕುಳದಿಂದ ಶಿಕ್ಷಕರಿಗೆ ಮುಕ್ತಿ ಕೊಡಿಸಬೇಕು. ಶೌಚಾಲಯ ನಿರ್ವಹಣೆಗೆ ಹೊರಗುತ್ತಿಗೆ ನೀಡುವಂತೆ ಮನವಿ ಮಾಡಿದ್ದಾರೆ.
ಇದಕ್ಕೆ ಉತ್ತರಿಸಿದ ಸಚಿವ ಮಧು ಬಂಗಾರಪ್ಪ, ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸ್ವಚ್ಛತಾಗಾರರ ಹುದ್ದೆಗಳಿಗೆ ಮಂಜೂರಾತಿ ನೀಡಲಾಗಿಲ್ಲ. ಶೌಚಾಲಯ ಸ್ವಚ್ಛತೆ ನಿರ್ವಹಣೆಗಾಗಿ ಸ್ಥಳೀಯ ಶಾಲಾ ಮೇಲುಸ್ತುವಾರಿ ಸಮಿತಿಯು ಸಿಬ್ಬಂದಿಯನ್ನು ನೇಮಿಸಲು ಅವಕಾಶ ಕಲ್ಪಿಸಲಾಗಿದೆ. ಶಾಲೆಯ ಅನುದಾನದಲ್ಲಿ ಶೇ.10ರಷ್ಟು ಹಣ ನೀಡಲಾಗುತ್ತಿದೆ. ನಿರ್ವಹಣೆಗೆ ಮೀಸಲಿಟ್ಟಿರುವ ಹಣ ಕಡಿಮೆಯಿದ್ದು, ಇಲಾಖಾ ಮಟ್ಟದಲ್ಲಿ ಚರ್ಚೆ ನಡೆಸಿ ಶೇ.20ರಿಂದ 30ರಷ್ಟು ಹಣ ಒದಗಿಸಲಾಗುವುದು ಎಂದಿದ್ದಾರೆ.



















