ಮುಂಬೈ: ಪ್ರತಿ ವರ್ಷದಂತೆ ಈ ಬಾರಿಯೂ ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಅವರ ಕುಟುಂಬ ಸದಸ್ಯರು ಗಣೇಶ ಚತುರ್ಥಿಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಿದ್ದಾರೆ. ಬುಧವಾರ ಮುಂಬೈನಲ್ಲಿರುವ ಸಹೋದರಿ ಅರ್ಪಿತಾ ಖಾನ್ ಶರ್ಮಾ ಅವರ ನಿವಾಸದಲ್ಲಿ ನಡೆದ ಈ ಸಂಭ್ರಮದಲ್ಲಿ, ಸಲ್ಮಾನ್ ಖಾನ್ ತಮ್ಮ ತಂದೆ ಸಲೀಂ ಖಾನ್ ಮತ್ತು ತಾಯಿ ಸಲ್ಮಾ ಖಾನ್ ಅವರೊಂದಿಗೆ ಗಣೇಶನಿಗೆ ಆರತಿ ಬೆಳಗಿದ್ದಾರೆ.
ಸಲ್ಮಾನ್ ಖಾನ್ ಅವರು ತಮ್ಮ ‘ಎಕ್ಸ್’ (ಹಿಂದಿನ ಟ್ವಿಟರ್) ಖಾತೆಯಲ್ಲಿ ಈ ಕುರಿತು ವಿಡಿಯೇ ಹಂಚಿಕೊಂಡಿದ್ದಾರೆ. ಅವರು ಕಪ್ಪು ಶರ್ಟ್ ಧರಿಸಿ ಗಣಪತಿಗೆ ಆರತಿ ಮಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಖಾನ್ ಕುಟುಂಬದ ಸಂಭ್ರಮ
ಆಚರಣೆಯಲ್ಲಿ ಸಲ್ಮಾನ್ ಖಾನ್ ಅವರ ಸಹೋದರರಾದ ಅರ್ಬಾಜ್ ಖಾನ್, ಸೊಹೈಲ್ ಖಾನ್, ಮತ್ತು ಸಹೋದರಿ ಅಲ್ವಿರಾ ಖಾನ್ ಅಗ್ನಿಹೋತ್ರಿ ಕೂಡ ಭಾಗವಹಿಸಿದ್ದರು. ಹೂವುಗಳಿಂದ ಅಲಂಕೃತಗೊಂಡಿದ್ದ ಗಣಪತಿ ವಿಗ್ರಹವು ದೈವಿಕ ಮತ್ತು ಪ್ರಶಾಂತ ವಾತಾವರಣವನ್ನು ಸೃಷ್ಟಿಸಿತ್ತು. ಈ ಕಾರ್ಯಕ್ರಮವು ನಂಬಿಕೆ, ಪ್ರೀತಿ ಮತ್ತು ಕುಟುಂಬದ ಒಗ್ಗಟ್ಟನ್ನು ಪ್ರತಿಬಿಂಬಿಸಿತು ಎಂದು ಅಲ್ಲಿ ನೆರೆದವರು ಹೇಳಿದ್ದಾರೆ. ನಟರಾದ ರಿತೇಶ್ ದೇಶಮುಖ್ ಮತ್ತು ಜೆನಿಲಿಯಾ ಡಿಸೋಜಾ ಕೂಡ ತಮ್ಮ ಮಕ್ಕಳೊಂದಿಗೆ ಈ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.
ಸದ್ಯಕ್ಕೆ ಸಲ್ಮಾನ್ ಖಾನ್ ಅವರು ಲಡಾಖ್‌ನಲ್ಲಿ ತಮ್ಮ ಮುಂಬರುವ ಚಿತ್ರ ‘ಬ್ಯಾಟಲ್ ಆಫ್ ಗಲ್ವಾನ್’ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. 2020ರ ಜೂನ್‌ನಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಗಲ್ವಾನ್ ಕಣಿವೆ ಸಂಘರ್ಷವನ್ನು ಆಧರಿಸಿದ ಈ ಚಿತ್ರದಲ್ಲಿ, ಸಲ್ಮಾನ್ ಖಾನ್ ಅವರು ಸಂಘರ್ಷದ ನೇತೃತ್ವ ವಹಿಸಿದ್ದ ಕರ್ನಲ್ ಬಿ. ಸಂತೋಷ್ ಬಾಬು ಅವರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಚಿತ್ರದಲ್ಲಿ ಚಿತ್ರಾಂಗದಾ ಸಿಂಗ್, ಜೈನ್ ಶಾ, ಮತ್ತು ಅಂಕುರ್ ಭಾಟಿಯಾ ಸೇರಿದಂತೆ ಹಲವು ತಾರೆಯರಿದ್ದಾರೆ.
ಇದರ ಜೊತೆಗೆ, ಸಲ್ಮಾನ್ ಖಾನ್ ಅವರು ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ 19’ ಅನ್ನು ಕೂಡ ನಿರೂಪಣೆ ಮಾಡುತ್ತಿದ್ದಾರೆ.