ನೆಲಮಂಗಲ : ಮಹಾರಾಷ್ಟ್ರ ನೋಂದಣಿ ಇಲ್ಲದೆ ಸಂಚರಿಸುತ್ತಿದ್ದ ಆಟೋ ಚಾಲಕರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದ RTO ಅಧಿಕಾರಿಗೆ ಬಿಷ್ಣೋಯಿ ಗ್ಯಾಂಗ್ ಹೆಸರಿನಲ್ಲಿ ಬೆದರಿಕೆ ಕರೆ ಬಂದಿರುವ ಘಟನೆ ಬೆಳಕಿಗೆ ಬಂದಿದೆ.
ಆಲ್ ಇಂಡಿಯಾ ಮೋಟಾರ್ ವೆಹಿಕಲ್ ಫೆಡರೇಷನ್ ವತಿಯಿಂದ ಆಯೋಜಿಸಿದ್ದ ಕ್ರಿಕೆಟ್ ಟೂರ್ನಮೆಂಟ್ಗೆ ಆಗಮಿಸಿದ್ದ ಮಹಾರಾಷ್ಟ್ರದ ಆರ್‌ಟಿಒ ಅಧಿಕಾರಿ ಪ್ರಸಾದ್ ಶಿವಪ್ರಸಾದ್ ನಾಲ್ವಡೆ ಅವರಿಗೆ ಬೆದರಿಕೆ ಕರೆ ಬಂದಿದ್ದು, ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಾರಾಷ್ಟ್ರದ ಕಾಶಿ ಗಾಂವ್ ಪೊಲೀಸ್ ಠಾಣೆಯಲ್ಲಿ ಮೊದಲು ದೂರು ನೀಡಿದ್ದು, ಅಲ್ಲಿ ಜೀರೋ ಎಫ್‌ಐಆರ್ ದಾಖಲಿಸಿದ ನಂತರ, ಕೃತ್ಯ ನಡೆದ ಸ್ಥಳವನ್ನು ಆಧರಿಸಿ ಪ್ರಕರಣವನ್ನು ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಮಹಾರಾಷ್ಟ್ರದ ಪ್ರಾದೇಶಿಕ ಸಾರಿಗೆ ಕಚೇರಿ (ಆರ್‌ಟಿಒ) ಅಧಿಕಾರಿ ಪ್ರಸಾದ್ ಶಿವಪ್ರಸಾದ್ ನಾಲ್ವಡೆ ಕಳೆದ ವಾರ ಬೆಂಗಳೂರುಗೆ ಆಗಮಿಸಿ, ಆಲ್ ಇಂಡಿಯಾ ಮೋಟಾರ್ ವೆಹಿಕಲ್ ಫೆಡರೇಷನ್ ವತಿಯಿಂದ ಆಯೋಜಿಸಿದ್ದ ರಸ್ತೆ ಸುರಕ್ಷತಾ ಅಭಿಯಾನದ ಭಾಗವಾಗಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮವು ಸೋಲದೇವನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಅಶೋಕ ರೈಸಿಂಗ್ ಸ್ಟಾರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದಿತ್ತು.
ಏಪ್ರಿಲ್ 12ರಂದು ಗುಣಿ ಅಗ್ರಹಾರ ಪ್ರದೇಶದಲ್ಲಿದ್ದ ವೇಳೆ ಅವರಿಗೆ ಈ ಬೆದರಿಕೆ ಕರೆ ಬಂದಿದ್ದರಿಂದ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿಯೇ ಈ ಪ್ರಕರಣ ದಾಖಲಾಗಿದ್ದು, ಕರೆ ಮಾಡಿದವರ ಬಗ್ಗೆ ತನಿಖೆ ಆರಂಭಿಸಲಾಗಿದೆ.
ಅಧಿಕಾರಿಗೆ ರವಿ ಬಿಷ್ಣೋಯಿ ಗ್ಯಾಂಗ್ ಹೆಸರಿನಲ್ಲಿ ಕರೆ ಮಾಡಿ ಬೆದರಿಕೆ ಹಾಕಲಾಗಿದ್ದು, ಆಟೋ ಚಾಲಕರಿಗೆ ಕಠಿಣ ಕ್ರಮ ಕೈಗೊಳ್ಳುತ್ತಿದ್ದೀರಿ, ಇದರ ಪರಿಣಾಮ ನಿಮ್ಮ ಕುಟುಂಬದ ಮೇಲೆ ಬೀಳುತ್ತದೆ ಎಂದು ಧಮ್ಕಿ ಹಾಕಲಾಗಿದೆ ಎನ್ನಲಾಗಿದೆ. ಮಹಾರಾಷ್ಟ್ರದಲ್ಲಿ ದಾಖಲೆ ಇಲ್ಲದ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ರೀತಿಯ ಬೆದರಿಕೆ ಹಾಕಿದ್ದಾರೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಪ್ರಕರಣದ ಹಿನ್ನೆಲೆ ಹಾಗೂ ಗ್ಯಾಂಗ್ ಸಂಪರ್ಕಗಳ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.
ಇದನ್ನೂ ಓದಿ : ಹೊಸ ಬೈಕ್ ತೆಗೆದುಕೊಂಡ ದಿನವೇ ಕಳ್ಳತನ.. ಸಿಸಿಟಿವಿಯಲ್ಲಿ ಖದೀಮರ ಕೃತ್ಯ ಸೆರೆ!



















