ಬೆಂಗಳೂರು: ದೇಶದಲ್ಲಿ ಯುಪಿಐ ಪೇಮೆಂಟ್ ಪರಾಕಾಷ್ಠೆ ತಲುಪಿದೆ. ಸಣ್ಣ ಟೀ ಅಂಗಡಿಗಳಿಂದ ಹಿಡಿದು, ದೊಡ್ಡ ದೊಡ್ಡ ಮಾಲ್ ಗಳಲ್ಲಿ ಕೂಡ ಈಗ ಯುಪಿಐ ಮೂಲಕ ಆನ್ ಲೈನ್ ನಲ್ಲಿ ಹಣ ಪಾವತಿಸಬಹುದಾಗಿದೆ. ಹಾಗಾಗಿ, ಈಗ ಹೆಚ್ಚಿನ ಜನರಿಗೆ ನಗದು ಇಟ್ಟುಕೊಳ್ಳುವ ಅವಶ್ಯಕತೆ ಹೆಚ್ಚಾಗಿಲ್ಲ. ಆದರೂ, ತುರ್ತು ಸಂದರ್ಭಗಳಲ್ಲಿ ಕೈಯಲ್ಲಿ ನಗದು ಇರಬೇಕಾಗುತ್ತದೆ. ಆದರೆ, ಎಟಿಎಂಗಳಲ್ಲಿ ಹಣ ಡ್ರಾ ಮಾಡಲು ಹೋದಾಗ ಬರೀ 500 ರೂಪಾಯಿ ಮೌಲ್ಯದ ನೋಟುಗಳೇ ಲಭಿಸಿ, ಚಿಲ್ಲರೆ ಸಮಸ್ಯೆಯಾಗುತ್ತದೆ. ಇದನ್ನು ಮನಗಂಡಿರುವ ಆರ್ ಬಿ ಐ ಈಗ ಹೊಸ ಆದೇಶ ಹೊರಡಿಸಿದೆ.
ಹೌದು, ದೇಶಾದ್ಯಂತ ಎಟಿಎಂಗಳಲ್ಲಿ ಬ್ಯಾಂಕುಗಳು ಹೆಚ್ಚಿನ ಪ್ರಮಾಣದಲ್ಲಿ 100 ಹಾಗೂ 200 ರೂಪಾಯಿ ನೋಟುಗಳನ್ನೇ ವಿತರಿಸಬೇಕು ಎಂದು ಬ್ಯಾಂಕುಗಳಿಗೆ ಆರ್ ಬಿ ಐ ಆದೇಶ ಹೊರಡಿಸಿದೆ. ಹಾಗೆಯೇ, ಬ್ಯಾಂಕುಗಳಿಗೆ ಹೆಚ್ಚಿನ ಪ್ರಮಾಣದಲ್ಲಿ 100 ಹಾಗೂ 200 ರೂಪಾಯಿ ನೋಟುಗಳನ್ನು ಪೂರೈಸಲು ಕೂಡ ಆರ್ ಬಿ ಐ ಕ್ರಮ ತೆಗೆದುಕೊಳ್ಳುತ್ತಿದೆ. ಇದರೊಂದಿಗೆ ದೇಶದಲ್ಲಿ ಚಿಲ್ಲರೆ ಸಮಸ್ಯೆ ನೀಗಿಸಲು ಆರ್ ಬಿ ಐ ಹೊಸ ಕ್ರಮ ತೆಗೆದುಕೊಂಡಂತೆ ಆಗಲಿದೆ.
2025ರ ಸೆಪ್ಟೆಂಬರ್ 30ರೊಳಗೆ ದೇಶದಲ್ಲಿರುವ ಪ್ರತಿಯೊಂದು ಎಟಿಎಂ ಯಂತ್ರಗಳಲ್ಲಿ ಕನಿಷ್ಠ ಪಕ್ಷ ಒಂದು ಕ್ಯಾಸೆಟ್ ಮೂಲಕ ಶೇ.75ರಷ್ಟು ನಗದನ್ನು 100 ಮತ್ತು 200 ರೂಪಾಯಿ ನೋಟುಗಳ ರೂಪದಲ್ಲಿ ವಿತರಿಸುವಂತೆ ಖಚಿತಪಡಿಸಿಕೊಳ್ಳಬೇಕು. ಅಷ್ಟೇ ಅಲ್ಲ, 2026ರ ಮಾರ್ಚ್ 31ರೊಳಗೆ ಶೇ.90ರಷ್ಟು ನೋಟುಗಳು ಎಟಿಎಂಗಳಿಂದ 100, 200 ರೂಪಾಯಿ ಮೌಲ್ಯದ ನೋಟುಗಳೇ ಡ್ರಾ ಆಗುವಂತೆ ನೋಡಿಕೊಳ್ಳಬೇಕು ಎಂದು ಬ್ಯಾಂಕುಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಿದೆ.
ದೇಶದ ಆರ್ಥಿಕ ವ್ಯವಸ್ಥೆಯಲ್ಲಿ ಚಿಲ್ಲರೆ ನಗದು ಹರಿವನ್ನು ಸರಾಗವಾಗಿಸಲು ಇದು ಸಹಾಯಕವಾಗಿದೆ. ಬ್ಯಾಂಕುಗಳಿಗೆ ಈ ಗುರಿಗಳನ್ನು ಪೂರೈಸಲು ಸಾಕಷ್ಟು ಸಮಯ ನೀಡಿರುವುದರಿಂದ, ಎಟಿಎಂಗಳ ರಚನೆಯಲ್ಲಿ ಯಾವುದೇ ದೊಡ್ಡ ತಾಂತ್ರಿಕ ಬದಲಾವಣೆಗಳ ಅಗತ್ಯವಿಲ್ಲ ಎಂದು ಕೂಡ ಆರ್ ಬಿ ಐ ಸ್ಪಷ್ಟಪಡಿಸಿದೆ.



















