ಬೆಂಗಳೂರು : ಭಾನುವಾರ ನಡೆದ ಐಪಿಎಲ್ 2026 ರ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮಣಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿ ಬಿ) ತಂಡವು ಸತತ ಎರಡನೇ ಬಾರಿ ಐಪಿಎಲ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಎಂ.ಎಸ್ ಧೋನಿ ಮತ್ತು ರೋಹಿತ್ ಶರ್ಮಾ ಅವರ ನಂತರ ಐಪಿಎಲ್ ಪ್ರಶಸ್ತಿಯನ್ನು ಯಶಸ್ವಿಯಾಗಿ ಉಳಿಸಿಕೊಂಡ ಮೂರನೇ ನಾಯಕ ಎಂಬ ಹೆಗ್ಗಳಿಕೆಗೆ ರಜತ್ ಪಾಟಿದಾರ್ ಪಾತ್ರರಾಗಿದ್ದಾರೆ.
ರಜತ್ ಪಾಟಿದಾರ್ ಅವರ ಈ ಐತಿಹಾಸಿಕ ಸಾಧನೆಯು ಕ್ರಿಕೆಟ್ ವಲಯದಲ್ಲಿ ಭಾರಿ ಪ್ರಶಂಸೆಗೆ ಪಾತ್ರವಾಗಿದೆ. ಆದರೆ, ಆರ್ ಸಿ ಬಿ ಫ್ರಾಂಚೈಸಿಯ ಇತಿಹಾಸದಲ್ಲಿ ಮೊದಲ ಬಾರಿಗೆ ಪ್ರಶಸ್ತಿಯನ್ನು ಗೆದ್ದುಕೊಟ್ಟ ಮಹಿಳಾ ತಂಡದ ನಾಯಕಿ ಸ್ಮೃತಿ ಮಂಧಾನ ಅವರ ಪಾತ್ರವನ್ನು ಈ ಸಂದರ್ಭದಲ್ಲಿ ಮರೆಯುವಂತಿಲ್ಲ.
ಬದಲಾವಣೆಯ ರೂವಾರಿ ಸ್ಮೃತಿ ಮಂಧಾನ
ವಿಶ್ವ ಕ್ರಿಕೆಟ್ನ ಘಟಾನುಘಟಿ ಆಟಗಾರರನ್ನು ಹೊಂದಿದ್ದರೂ, ಆರ್ ಸಿ ಬಿ ತಂಡವು ಹಲವು ವರ್ಷಗಳ ಕಾಲ ಪ್ರಶಸ್ತಿ ಗೆಲ್ಲಲಾಗದೆ ಟೀಕೆಗಳಿಗೆ ಗುರಿಯಾಗಿತ್ತು. ‘ಈ ಸಲ ಕಪ್ ನಮ್ದೇ’ ಎಂಬ ಘೋಷವಾಕ್ಯವೂ ಕೇವಲ ಟ್ರೋಲ್ ಮಾಡಲು ಸೀಮಿತವಾಗಿತ್ತು. ಆದರೆ ಈ ಹತಾಶೆಯ ವಾತಾವರಣವನ್ನು ಬದಲಾಯಿಸಿದ್ದು ಸ್ಮೃತಿ ಮಂಧಾನ. ಅವರ ನಾಯಕತ್ವದಲ್ಲಿ, 2024 ರಲ್ಲಿ ಆರ್ ಸಿ ಬಿ ಮಹಿಳಾ ತಂಡವು ಚೊಚ್ಚಲ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯೂ ಪಿ ಎಲ್) ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಫ್ರಾಂಚೈಸಿಗೆ ಮೊದಲ ಬಾರಿಗೆ ಅಧಿಕೃತ ಟ್ರೋಫಿಯನ್ನು ತಂದುಕೊಟ್ಟಿತು. ರಜತ್ ಪಾಟಿದಾರ್ ಈಗ ಆ ಗೆಲುವಿನ ಪರಂಪರೆಯನ್ನು ಮುಂದುವರೆಸುತ್ತಿದ್ದರೂ, ಆರ್ ಸಿ ಬಿ ತಂಡಕ್ಕೆ ‘ನಾವು ಪ್ರಶಸ್ತಿ ಗೆಲ್ಲಬಹುದು’ ಎಂಬ ನಂಬಿಕೆಯನ್ನು ಹುಟ್ಟುಹಾಕಿದ್ದು ಸ್ಮೃತಿ ಮಂಧಾನ ಎನ್ನುವುದು ಅಕ್ಷರಶಃ ಸತ್ಯ.
ಆರ್ಸಿಬಿ ತಂಡದ ನಂಬಿಕೆ ಬದಲಿಸಿದ ನಾಯಕಿ
ಆರಂಭಿಕ ದಿನಗಳಲ್ಲಿ ಆರ್ ಸಿ ಬಿ ಪುರುಷರ ತಂಡದಂತೆಯೇ ಮಹಿಳಾ ತಂಡವೂ ಕೂಡ ಒತ್ತಡದ ಸಂದರ್ಭಗಳಲ್ಲಿ ಎಡವುತ್ತಿತ್ತು. 2023 ರ ಮೊದಲ ಆವೃತ್ತಿಯಲ್ಲಿ ಸತತ 5 ಪಂದ್ಯಗಳನ್ನು ಸೋತಾಗ, ಸ್ಮೃತಿ ಮಂಧಾನ ಅವರ ನಾಯಕತ್ವದ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ಆದರೆ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಫೈನಲ್ ಪಂದ್ಯದಲ್ಲಿ ಒತ್ತಡವನ್ನು ಸಮರ್ಥವಾಗಿ ನಿಭಾಯಿಸಿದ ಮಂಧಾನ, 8 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದರು. ಅಷ್ಟೇ ಅಲ್ಲದೆ, 2026 ರ ಡಬ್ಲ್ಯೂ ಪಿ ಎಲ್ ಫೈನಲ್ ಪಂದ್ಯದಲ್ಲಿ ಕೇವಲ 41 ಎಸೆತಗಳಲ್ಲಿ 87 ರನ್ ಸಿಡಿಸುವ ಮೂಲಕ ಅವರು ತಮ್ಮ ಸಾಮರ್ಥ್ಯವನ್ನು ಮತ್ತೊಮ್ಮೆ ಸಾಬೀತುಪಡಿಸಿದರು. ಮಂಧಾನ ಅವರು ಕೇವಲ ಪಂದ್ಯಗಳನ್ನು ಗೆಲ್ಲಲಿಲ್ಲ, ಬದಲಾಗಿ ಸಂಕಷ್ಟದ ಪರಿಸ್ಥಿತಿಯಿಂದ ಮೇಲೆದ್ದು ಬರುವ ಆತ್ಮವಿಶ್ವಾಸವನ್ನು ಇಡೀ ಫ್ರಾಂಚೈಸಿಗೆ ತುಂಬಿದರು. ಇಂದು ಪುರುಷರ ತಂಡವು ಮಹಿಳಾ ತಂಡದ ಈ ಆತ್ಮವಿಶ್ವಾಸದಿಂದ ಪ್ರೇರಣೆ ಪಡೆಯುತ್ತಿದೆ.
ವಿರಾಟ್ ಕೊಹ್ಲಿ ಭಾಷಣದ ಪ್ರಭಾವ
2023 ರಲ್ಲಿ ಆರ್ ಸಿ ಬಿ ಮಹಿಳಾ ತಂಡವು ಸತತ ಸೋಲುಗಳಿಂದ ಕಂಗೆಟ್ಟಿದ್ದಾಗ, ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಆಟಗಾರ್ತಿಯರೊಂದಿಗೆ ಮಾತನಾಡಿದ್ದರು. ಪ್ರಶಸ್ತಿಯ ಬಗ್ಗೆ ಯೋಚಿಸುವ ಬದಲು, ಮೈದಾನದಲ್ಲಿ ನೂರಕ್ಕೆ ನೂರರಷ್ಟು ಪ್ರಯತ್ನ ಹಾಕುವ ಬಗ್ಗೆ ಅವರು ಕಿವಿಮಾತು ಹೇಳಿದ್ದರು. ಈ ಮಾತುಗಳು ತಂಡದ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದವು. ಯಾವುದೇ ಪ್ರಶಸ್ತಿಗಾಗಿ 17 ವರ್ಷಗಳ ಕಾಲ ಕಾಯುತ್ತಿದ್ದ ಆರ್ ಸಿ ಬಿ ಫ್ರಾಂಚೈಸಿ, ಇದೀಗ ಐಪಿಎಲ್ ಮತ್ತು ಡಬ್ಲ್ಯೂ ಪಿ ಎಲ್ ಸೇರಿದಂತೆ ಕೇವಲ 3 ವರ್ಷಗಳಲ್ಲಿ 4 ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಸ್ಮೃತಿ ಮಂಧಾನ ಅವರು ಹಾಕಿಕೊಟ್ಟ ಗೆಲುವಿನ ಅಡಿಪಾಯದ ಮೇಲೆ ಇದೀಗ ರಜತ್ ಪಾಟಿದಾರ್ ಭವಿಷ್ಯದಲ್ಲಿ ಐಪಿಎಲ್ ಪ್ರಶಸ್ತಿಯ ಹ್ಯಾಟ್ರಿಕ್ ಸಾಧನೆಯತ್ತ ಕಣ್ಣಿಟ್ಟಿದ್ದಾರೆ.
ಇದನ್ನೂ ಓದಿ : IPLನಲ್ಲಿ ಆರ್ಸಿಬಿಗೆ ಸತತ ಎರಡನೇ ಕಿರೀಟ – ಮಾಗಿದ ವ್ಯಕ್ತಿತ್ವದ ಮೂಲಕ ಗಮನ ಸೆಳೆದ ಕೊಹ್ಲಿ



















