ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದ ಗ್ರಾಮದ ವ್ಯಾಪ್ತಿಯಲ್ಲಿ ಪ್ರತಿ ಮಳೆಗಾಲದ ಸಮಸ್ಯೆ ಯತಾವತ್ತಾಗಿ ಮತ್ತೆ ಎದ್ದು ಕುಂತಿದೆ. ಯತಾ ಪ್ರಕಾರ ಮಳೆ ಹೆಚ್ಚಾದಂತೆ ನೀರು ಹರಿವ ಕಾಲುವೆಯಿಂದ ರೈತರಿಗೆ ಅನಾನುಕೂಲವಾಗಿದೆ. ಅಸಲಿಗೆ, ಅರೆಹೊಳೆಯ ಗುಡ್ಡಗಾಡಿನ ಮೇಲಿಂದ ಹರಿದು ಬರುವ ನೀರು, ಕಾಲುವೆಯ ಮೂಲಕ ಬಯಲಲ್ಲಿ ಹರಿದು, ಸೌಪರ್ಣಿಕ ನದಿ ಸೇರೀಕೊಳ್ಳುತ್ತೆ. ಹಾಗೆ ಹರಿವ ಕಾಲುವೆಯು ಬಯಲು ಗದ್ದೆಗಳಲ್ಲಿ ನೆಲ ಮಟ್ಟಕ್ಕಿಂತಲೂ ಒಂದೆರಡಡಿ ಎತ್ತರದಲ್ಲಿದೆ. ಈ ಕಾಲುವೆಯಲ್ಲಿ ಬೇಸಿಗೆಯಲ್ಲಿ ಬೆಳೆದುಕೊಳ್ಳುವ ಸಸಿ-ಮರಗಳಿಂದ ಮುಳ್ಳು-ಪೊದೆಗಳಿಂದಾಗಿ, ಹರಿದು ಬರುವ ನೀರು ಸರಾಗವಾಗಿ ಹೋಗಲಾಗದೆ, ಗದ್ದೆಗಳತ್ತಲೇ ತುಂಬಿ ಮರಿಯುತ್ತವೆ. ಇಲ್ಲಿನ ಕಾಲುವೆಯ ಮಣ್ಣಿನ ದಂಡೆಗಳು ಸಡಿಲಗೊಂಡು ಒಡೆದು, ನಾಟಿ ಮಾಡುವ ಗದ್ದೆಯ ಮೇಲೆಲ್ಲಾ ತುಂಬಿ ಹರಿಯುತ್ತದೆ. ಪರಿಣಾಮ ಕೃಷಿ ಮೇಲೆ ಹೊಡೆತ ಬೀಳುತ್ತವೆ. ಇದು ಆ ಭಾಗದ ರೈತರ ಪ್ರತಿ ವರ್ಷದ ಗೋಳು!

ಈ ಬಗ್ಗೆ ಸೂಮಾರು ವರ್ಷಗಳಿಕದ ಸಂಬಂಧ ಪಟ್ಟ ಅಧಿಕಾರಿಗಳಿಗೆ ಮನವಿ ಕೊಡುತ್ತಲೇ ಬರಲಾಗಿದೆ. ಈ ವರ್ಷದವರೆಗೂ ಆ ಬಗ್ಗೆ ಯಾರೊಬ್ಬರೂ ಗಮನ ಹರಿಸಿಲ್ಲ. ಪ್ರತಿ ಬಾರಿಯಂತೆ ಅಲ್ಲಿನ ರೈತರು ತಾವೇ ಸೇರಿಕೊಂಡು ಮುಳ್ಳು, ಪೊದೆ, ಬೇಡದ ಸಸ್ಯಗಳನ್ನು ಕಿತ್ತು ಸ್ವಚ್ಚಗೊಳಿಸಿಕೊಂಡಿದ್ದಾರೆ. ಮಣ್ಣು ದಂಡೆಯನ್ನು ಆದಷ್ಟು ಗಟ್ಟಿಗೊಳಿಸಿ ಕಟ್ಟಿಕೊಂಡಿದ್ದಾರೆ. ಏನೇ ಆದರೂ ಅಲ್ಲಿನ ಮಳೆಗೆ ಮತ್ತೆ ಮತ್ತೆ ಅನಾನುಕೂಲ ಅಲ್ಲಿ ತಪ್ಪಿದ್ದಲ್ಲ!

ಈ ಭಾಗದ ರೈತರ ಬೇಡಿಕೆ ಈಡೇರಿಸುವಲ್ಲಿ ಅಲ್ಲಿನ ಶಾಸಕರು ಮನಸ್ಸು ಮಾಡಬೇಕಿದೆ. ಸ್ಥಳೀಯ ಶಾಸಕರಾದ ಗುರುರಾಜ್ ಗಂಟಿಹೊಳೆಗೂ ಈ ಬಗ್ಗೆ ಶಾಶ್ವತ ಪರಿಹಾರಕ್ಕಾಗಿ ರೈತರು ಮನವಿ ಕೊಟ್ಟಿದ್ದೂ ಆಗಿದೆ. “ಅರೆಹೊಳೆಯ ಗುಡ್ಡ ಪ್ರದೇಶದಿಂದ ಹರಿದು ಬರುವ ನೀರು ಸರಾಗವಾಗಿ ಹರಿದು ಸೌಪರ್ಣಿಕ ನದಿ ಸೇರಲು ಅಲ್ಲೊಂದು ಗಟ್ಟಿ ಕಾಲುವೆಯ ಅವಶ್ಯಕತೆ ಇದೆ. ಇರುವ ಕಾಲುವೆ ಮಾರ್ಗದಲ್ಲೇ, ನೆಲ ಮಟ್ಟದಿಂದ ಮೂರ್ನಾಲ್ಕು ಅಡಿ ಆಳದ ಕಾಂಕ್ರೀಟ್ ಕಾಲುವೆ ನಿರ್ಮಾಣ ಮಾಡಿ ಶಾಶ್ವತ ಪರಿಹಿರ ದೊರಕಿಸಿಕೊಡುವಂತೆ” ಮನವಿಮಾಡಲಾಗಿದೆ. ಈ ಹಿಂದೆ ಜಿಲ್ಲಾಧಿಕಾರಿಗಳೂ ಸೇರಿದಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೂ ಮನವಿ ಮಾಡಿದ್ದಾಗಿತ್ತು. ಮುಂದಿನ ಕ್ರಮಕ್ಕಾಗಿ ಅವರು ಕಾಯುತ್ತಿದ್ದಾರೆ. ಮನವಿಗೆ ಬೆಲೆ ಸಿಗದೇ ಮತ್ತದೇ ಹಳೆಯ ನಿರ್ಲಕ್ಷ್ಯ ಧೋರಣೆ ಮುಂದುವರೆದರೇ, ಮುಂದಿನ ದಿನಗಳಲ್ಲಿ ರೈತರ ಹೋರಾಟ ಚುರುಕುಗೊಳ್ಳಲಿದ್ದು, ಮತದಾನ ಬಹಿಷ್ಕಾರ ಹಾಕಲು ಚಿಂತನೆ ನಡೆದಿದೆ. ಈ ಬಗ್ಗೆ ಶಾಸಕರು ಮತ್ತು ಅಧಿಕಾರಿ ವಲಯ ಗಮನಹರಿಸಿ ರೈತರಿಗೆ ಅನುಕೂಲವಾಗುವಂಥ ರೀತಿಯಲ್ಲಿ ಕ್ರಮದ ನಿರೀಕ್ಷೆ ಇಡಲಾಗಿದೆ. ವಿಶೇಷವಾಗಿ ಈ ಭಾಗದ ಮತದಾರ ವಿಧಾನಸಭಾ ಚುನಾವಣೆಯಲ್ಲಿ, ಶಾಸಕ ಗುರುರಾಜ್ ಗಂಟಿಹೊಳೆಗೆ ಹೆಚ್ಚಿನ ಸಂಖ್ಯೆಯ ಲೀಡ್ ಕೊಡುವ ಮೂಲಕ ಗೆಲುವಿಗೆ ಸಹಕರಿಸಿದ್ದನ್ನು ಮಾನ್ಯ ಶಾಸಕರು ಮರೆಯುವಂತಿಲ್ಲ. ರೈತ ಬಾಂಧವರ ಮನವಿಗೆ ಶೀಘ್ರ ಗತಿಯಲ್ಲಿ ಪರಿಹಾರ ದೊರಕಿಸಿಕೊಡುವ ನಿರೀಕ್ಷೆ ಇಡಲಾಗಿದೆ. ಹಾಗೆಯೇ ಆಗಲಿ ಎಂಬುದು,”ಕರ್ನಾಟಕ ನ್ಯೂಸ್ ಬೀಟ್” ಪತ್ರಿಕೆಯ ಕಳ-ಕಳಿ.
