ಢಾಕಾ: ಬಾಂಗ್ಲಾದೇಶದಲ್ಲಿ ಇನ್ನೂ ಬೂದಿ ಮುಚ್ಚಿದ ಕೆಂಡದಂತಹ ವಾತಾವರಣ ಇದೆ. ಶೇಖ್ ಹಸೀನಾ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಭಾರತಕ್ಕೆ ಪಲಾಯನ ಮಾಡಿದ್ದಾರೆ. ಈ ಮಧ್ಯೆ ಅಲ್ಲಿನ ಪ್ರತಿಭಟನಾಕಾರರು ಮತ್ತೆ ಬೀದಿಗೆ ಇಳಿದಿದ್ದಾರೆ. ಈಗ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ (Chief Justice of Bangladesh) ರಾಜೀನಾಮೆಗೆ ಆಗ್ರಹಿಸಿದ್ದಾರೆ.
ನ್ಯಾಯಾಲಯದ ಸುತ್ತ ಪ್ರತಿಭಟನಾಕಾರರು ತೀವ್ರ ಪ್ರತಿಭಟನೆ ನಡೆಸಿದ ನಂತರ ಸಿಜೆಬಿ ಒಬೈದುಲ್ ಹಸನ್ ಅವರು ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಸುಪ್ರೀಂ ಕೋರ್ಟ್‍ನ (Supreme Court) ಎರಡೂ ವಿಭಾಗಗಳ ಎಲ್ಲಾ ನ್ಯಾಯಮೂರ್ತಿಗಳೊಂದಿಗೆ ಪೂರ್ಣ ನ್ಯಾಯಾಲಯದ ಸಭೆಗೆ ಹಸನ್ ಕರೆ ನೀಡಿದ ನಂತರ ಪ್ರತಿಭಟನೆ ಆರಂಭವಾಯಿತು.
ಪ್ರತಿಭಟನಾನಿರತ ವಿದ್ಯಾರ್ಥಿಗಳು ಫುಲ್ ಕೋರ್ಟ್ ಸಭೆ ಕರೆಯುವುದನ್ನು ನ್ಯಾಯಾಂಗ ಧಂಗೆ ಎಂದು ಪರಿಗಣಿಸಿ ಹೈಕೋರ್ಟ್ ಆವರಣಕ್ಕೆ ಮುತ್ತಿಗೆ ಹಾಕುವುದಾಗಿ ಘೋಷಿಸಿದರು. ವಿದ್ಯಾರ್ಥಿಗಳ ಘೋರ ಪ್ರತಿಭಟನೆಯ ನಂತರ ಮುಖ್ಯ ನ್ಯಾಯಮೂರ್ತಿ ಹಸನ್ ಸಭೆಯನ್ನು ಮುಂದೂಡಿ, ರಾಜೀನಾಮೆ ಘೋಷಿಸಿದ್ದಾರ ಎನ್ನಲಾಗಿದೆ.
ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರನ್ನು ಸಂಪರ್ಕಿಸಿದ ನಂತರ ನ್ಯಾಯಾಧೀಶರು ತಮ್ಮ ರಾಜೀನಾಮೆಯನ್ನು ಸಲ್ಲಿಸಲಿದ್ದಾರೆ ಎನ್ನಲಾಗಿದೆ. ಆದರೆ, ಫುಡಾರಿಗಳು ಪ್ರತಿಭಟನೆ ಸಂದರ್ಭದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಅನೇಕ ಮನೆಗಳು ಮತ್ತು ಅಂಗಡಿಗಳನ್ನು ಧ್ವಂಸ ಮಾಡಿದ್ದಾರೆ. ಹೀಗಾಗಿ ವಾಯುವ್ಯ ಬಾಂಗ್ಲಾದೇಶದಲ್ಲಿ ನೂರಾರು ಜನರು ನೆರೆಯ ಭಾರತಕ್ಕೆ ಪಲಾಯನ ಮಾಡಲು ಯತ್ನಿಸುತ್ತಿದ್ದಾರೆ. ಈ ಮಧ್ಯೆ ಬಾಂಗ್ಲಾದೇಶದ ಹಂಗಾಮಿ ನಾಯಕ ಮೊಹಮ್ಮದ್ ಯೂನಸ್ ಧಾರ್ಮಿಕ ಏಕತೆಗಾಗಿ ಮನವಿ ಮಾಡಿದ್ದಾರೆ.