ಬಾಗಲಕೋಟೆ: ಪ್ರಭುಲಿಂಗ ದೇವರಿಗೆ 16 ಲಕ್ಷ ಮೌಲ್ಯದ ಬೆಳ್ಳಿ ಬಾಗಿಲು ಮಾಡಿಸಿದ್ದ ಅಜ್ಜಿಯನ್ನು ಆಕೆಯ ಅಣ್ಣನ ಮಕ್ಕಳು ಆಸ್ತಿಗಾಗಿ ಕೊಲೆ ಮಾಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲ್ಲೂಕಿನ ಜಗದಾಳ ಬಳಿ ನಡೆದಿದೆ.
ಚಂದ್ರವ್ವ ನಿಲಜಗಿ(80)ಕೊಲೆಯಾದ ಅಜ್ಜಿ. ಆಸ್ತಿಗಾಗಿ ಅಜ್ಜಿಯ ಅಣ್ಣನ ಮಕ್ಕಳು ಜಗದಾಳ ಬಳಿಯ ಘಟಪ್ರಭಾ ಕಾಲುವೆಗೆ ಎಸೆದು, ಬಳಿಕ ಬದುಕಿಸುವ ನಾಟಕವಾಡಿ ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದ್ದಾರೆ.
ಈ ವೇಳೆ ಅವಸರದಲ್ಲಿ ಅಂತ್ಯಸಂಸ್ಕಾರ ಮಾಡಲು ಸಿದ್ದತೆ ನಡೆಸಿದ್ದಾರೆ. ಶವದ ಎದುರು ಸಂಬಂಧಿಕರು ಕಣ್ಣೀರು ಹಾಕುತ್ತಿದ್ದರು. ಇದರಿಂದ ಸಂಶಯ ಬಂದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಬನಹಟ್ಟಿ ಪೊಲೀಸರು ಸ್ಥಳಕ್ಕೆ ಹೋದಾಗ ಅಸಲಿಯತ್ತು ಬಯಲಾಗಿದೆ. ಅಜ್ಜಿಯ ಅಣ್ಣನ ಮಕ್ಕಳು ಹಾಗೂ ಅಜ್ಜಿ ಮಧ್ಯೆ11 ಎಕರೆ ಆಸ್ತಿ ವಿವಾದ ಇದೆ ಎಂಬ ಮಾಹಿತಿ ಪಡೆದಿದ್ದಾರೆ. ಈ ಸಂಬಂಧ ಜನೇವರಿ 13 ರಂದು ಸರ್ವೆ ಮಾಡಲು ಸರ್ವೆ ಅಧಿಕಾರಿಗಳು ಬಂದಿದ್ದರು. ಆಗ ಅಣ್ಣನ ಮಕ್ಕಳು ಅಜ್ಜಿಯನ್ನು ಹೊಲದ ಬಳಿ ಇದ್ದ ಕಾಲುವೆಗೆ ನೂಕಿ ಮತ್ತೆ ಬದುಕಿಸುವ ನಾಟಕ ಮಾಡಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ನಡುರಾತ್ರಿ ಪತ್ನಿ, ಮಗಳು, ಅತ್ತೆ ಮೇಲೆ ಹಲ್ಲೆ.. ಅಸಹಾಯಕತೆಯಿಂದ ಬೀದಿಗೆ ಓಡಿಬಂದ ಮೂವರು | ವಿಶು ಶೆಟ್ಟಿ ಅಂಬಲಪಾಡಿಯಿಂದ ರಕ್ಷಣೆ



















