ಮಧ್ಯ ಪ್ರಾಚ್ಯ ಯುದ್ಧದ ಭೀಕರತೆ ಮತ್ತು ಹೌತಿ ಬಂಡುಕೋರರ ದಾಳಿಯ ಭದ್ರತಾ ಕಾರಣಗಳಿಂದಾಗಿ ಸೌದಿಯಲ್ಲಿ ಸಿಲುಕಿ ಪರದಾಡುತ್ತಿದ್ದ ದಾವಣಗೆರೆಯ 45 ಉಮ್ರಾ ಯಾತ್ರಿಗಳು ಇಂದು ಕೊನೆಗೂ ಸುರಕ್ಷಿತವಾಗಿ ತವರಿಗೆ ಮರಳುತ್ತಿದ್ದಾರೆ. ಇದೇ ತಿಂಗಳು 12 ಕ್ಕೆ ಅಲ್ ಪಲ್ ಟೂರ್ ಅಂಡ್ ಟ್ರಾವೆಲ್ಸ್ ಮೂಲಕ ಉಮ್ರಾ ಯಾತ್ರೆಗೆ ತೆರಳಿದ್ದ ಈ ಯಾತ್ರಿಗಳ ವಿಮಾನ ಹಾರಾಟ ದಿಢೀರ್ ರದ್ದಾಗಿ ಫ್ಲೈಟ್ ಸಿಗದೇ ಸಂಕಷ್ಟಕ್ಕೆ ಸಿಲುಕಿದ್ದರು. ವಿಮಾನ ವ್ಯತ್ಯಯದಿಂದಾಗಿ ಹೋಟೆಲ್ ಹಾಗೂ ಊಟ ಸಿಗದೇ ತೀವ್ರ ಪರದಾಡುತ್ತಿದ್ದ ಯಾತ್ರಿಗಳ ನೆರವಿಗೆ ಜಿಲ್ಲಾಡಳಿತದ ಸೂಚನೆ ಮೇರೆಗೆ ಕೇಂದ್ರ ಸರ್ಕಾರ ಧಾವಿಸಿದ್ದು, ವಿದೇಶಾಂಗ ಇಲಾಖೆ ತಕ್ಷಣವೇ ಹೋಟೆಲ್ ಹಾಗೂ ಊಟದ ವ್ಯವಸ್ಥೆ ಕಲ್ಪಿಸಿತ್ತು.
ಇದೀಗ ಕೊನೆಗೂ ತವರಿಗೆ ಮರಳಲು ವಿಮಾನ ದೊರೆತಿದ್ದು, ಫ್ಲೈಟ್ ಟಿಕೆಟ್ ಬುಕ್ ಆಗಿದೆ. ಸೌದಿಯ ಜೆದ್ದ ವಿಮಾನ ನಿಲ್ದಾಣದಿಂದ ಹೊರಟು ಬಹರೇನ್ ತಲುಪಿ, ಅಲ್ಲಿಂದ ಮತ್ತೊಂದು ವಿಮಾನದ ಮೂಲಕ ಇಂದು ರಾತ್ರಿ 9.15ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಯಾತ್ರಿಗಳ ದಂಡು ಸುರಕ್ಷಿತವಾಗಿ ಬಂದು ತಲುಪಲಿದೆ.

















