ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ʼನಮ್ಮ ಮೆಟ್ರೋʼ ರೈಲು ಹಳಿಗೆ ಹಾರಿ ಪ್ರಯಾಣಿಕನೋರ್ವ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮೆಜೆಸ್ಟಿಕ್‌ನ ನಾಡಪ್ರಭು ಕೆಂಪೇಗೌಡ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.
ಮಾದವಾರ-ರೇಷ್ಮೆ ಸಂಸ್ಥೆ ಹಸಿರು ಮಾರ್ಗದ ಹಳಿಗೆ ಇಂದು ಮಧ್ಯಾಹ್ನ 3.19ರ ಸುಮಾರಿಗೆ ಪ್ರಯಾಣಿಕ ಹಾರಿದ್ದು, ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವ್ಯಕ್ತಿ ಗಂಭೀರ ಗಾಯಗಳಾಗಿದ್ದು, ಆತನನ್ನು ಸದ್ಯ ರಕ್ಷಿಸಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಪ್ಲಾಟ್ ಫಾರ್ಮ್‌ನಲ್ಲಿ ನಿಂತಿದ್ದ ಪ್ರಯಾಣಿಕ ರೈಲು ಬರುತ್ತಿದ್ದಂತೆ ಏಕಾಏಕಿ ಹಳಿಗೆ ಹಾರಿದ್ದಾನೆ. ವ್ಯಕ್ತಿ ಆತ್ಮಹತ್ಯೆಗೆ ಯತ್ನಿಸಲು ನಿಖರ ಕಾರಣ ಏನು ಎಂಬುವುದು ಇನ್ನು ತಿಳಿದುಬಂದಿಲ್ಲ. ಸದ್ಯ ಹಸಿರು ಮಾರ್ಗದ ಮೆಟ್ರೋ ಸಂಚಾರ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಉಳಿದ ಪ್ರಯಾಣಿಕರು ಪರದಾಟ ನಡೆಸುವಂತಾಗಿದ್ದು, ಶೀಘ್ರದಲ್ಲೇ ಸಂಚಾರ ಆರಂಭಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ನಿರ್ವಹಿಸುತ್ತಿದ್ದಾರೆ.


















