ಬಾರಾಬಂಕಿ (ಉತ್ತರ ಪ್ರದೇಶ): ಪತಿಯನ್ನು ಹತ್ಯೆ ಮಾಡಲು ಇ-ರಿಕ್ಷಾ ಚಾಲಕನಿಗೆ 1 ಲಕ್ಷ ರೂಪಾಯಿ ಸುಪಾರಿ ನೀಡಿದ್ದ ಮಹಿಳೆಯೊಬ್ಬಳನ್ನು ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ಬಂಧಿಸಲಾಗಿದೆ. ರಸ್ತೆ ಅಪಘಾತವೆಂದು ಬಿಂಬಿಸಲು ಯತ್ನಿಸಿದ್ದ ಈ ಘೋರ ಕೃತ್ಯ, ದಂಪತಿಯ 8 ವರ್ಷದ ಮಗನು ಪೊಲೀಸರ ಮುಂದೆ ಸತ್ಯ ಬಾಯಿಬಿಟ್ಟಾಗ ಬೆಳಕಿಗೆ ಬಂದಿದೆ.
ಸೋಮವಾರ ಬಾರಾಬಂಕಿಯ ಘುಂಘೇಟರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮಹಿಳೆ ಪೂಜಾ ಗೌತಮ್, ತನ್ನ ಪತಿ ಹನುಮಂತಲಾಲ್ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ಆರಂಭದಲ್ಲಿ ಹೇಳಿಕೆ ನೀಡಿದ್ದಳು. ಆದರೆ ಆಕೆಯ ಹೇಳಿಕೆಗಳಲ್ಲಿನ ವ್ಯತ್ಯಾಸದಿಂದ ಅನುಮಾನಗೊಂಡ ಪೊಲೀಸರು, ಹೆಚ್ಚಿನ ತನಿಖೆ ಆರಂಭಿಸಿದ್ದರು. ಈ ವೇಳೆ, ಸಂಬಂಧಿಕರ ಸೋಗಿನಲ್ಲಿ ಮಗುವನ್ನು ವಿಚಾರಿಸಿದಾಗ, ಬಾಲಕನು, “ಅಪ್ಪನನ್ನು ಕೊಂದುಹಾಕಿದ್ದಾರೆ” ಎಂದು ಅಳುತ್ತಲೇ ಸತ್ಯವನ್ನು ಬಹಿರಂಗಪಡಿಸಿದ್ದಾನೆ.
“ಕೊಲೆಯ ಹಿಂದಿನ ಕಾರಣ”
ವಿಚಾರಣೆ ವೇಳೆ, ಪೂಜಾ ತನ್ನ ಸೋದರ ಸಂಬಂಧಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎಂಬ ವಿಷಯ ಬೆಳಕಿಗೆ ಬಂದಿದೆ. ಈ ವಿಚಾರವಾಗಿ ಮನೆಯಲ್ಲಿ ಜಗಳಗಳು ಹೆಚ್ಚಾದಾಗ, ಪತಿಯನ್ನು ಮುಗಿಸಲು ಆಕೆ ಸಂಚು ರೂಪಿಸಿದ್ದಳು. ಇದಕ್ಕಾಗಿ, ಲಕ್ನೋದ ಇ-ರಿಕ್ಷಾ ಚಾಲಕ ಕಮಲೇಶ್‌ನನ್ನು ಭೇಟಿಯಾಗಿ, ತನ್ನ ಪತಿಯನ್ನು ಕೊಲೆ ಮಾಡಿದರೆ, 1 ಲಕ್ಷ ರೂಪಾಯಿ ನೀಡುವುದಾಗಿ ಒಪ್ಪಂದ ಮಾಡಿಕೊಂಡಿದ್ದಳು.
“ಕೊಲೆ ನಡೆದಿದ್ದು ಹೇಗೆ”?
ಸೋಮವಾರ ಸಂಜೆ ಜಾತ್ರೆಯಿಂದ ಹಿಂತಿರುಗುವಾಗ, ಪೂಜಾ ಕಮಲೇಶ್‌ನ ಇ-ರಿಕ್ಷಾವನ್ನು ಬುಕ್ ಮಾಡಿದ್ದಳು. ಮಾರ್ಗಮಧ್ಯೆ, ಕಮಲೇಶ್ ಕಬ್ಬಿಣದ ರಾಡ್‌ನಿಂದ ಹನುಮಂತಲಾಲ್ ಮೇಲೆ ಹಲ್ಲೆ ನಡೆಸಿ, ಸ್ಥಳದಲ್ಲೇ ಅವರನ್ನು ಕೊಂದುಹಾಕಿದ್ದ. ನಂತರ, ಪೂಜಾ ಮತ್ತು ಕಮಲೇಶ್ ಇಬ್ಬರೂ ಸೇರಿ ಇದನ್ನು ರಸ್ತೆ ಅಪಘಾತವೆಂದು ಕಥೆ ಕಟ್ಟಿದ್ದರು.
“ಮಗನಿಂದ ಸತ್ಯ ಬಯಲು”
ಬಾರಾಬಂಕಿ ಎಎಸ್‌ಪಿ ವಿಕಾಸ್ ಚಂದ್ರ ತ್ರಿಪಾಠಿ ಅವರು, “ಮಗುವಿನ ಪ್ರಾಮಾಣಿಕತೆ ಮತ್ತು ಪೊಲೀಸ್ ತಂಡದ ಸೂಕ್ಷ್ಮತೆಯಿಂದ ಈ ಕೊಲೆ ಪ್ರಕರಣವನ್ನು ಬೇಧಿಸಲು ಸಾಧ್ಯವಾಯಿತು” ಎಂದು ತಿಳಿಸಿದ್ದಾರೆ. ಪೊಲೀಸರು ಪೂಜಾ ಮತ್ತು ಕಮಲೇಶ್ ಇಬ್ಬರನ್ನೂ ಬಂಧಿಸಿದ್ದು, ಅವರಿಂದ ಕೊಲೆಗೆ ಬಳಸಿದ ಆಯುಧ, ಮೊಬೈಲ್ ಫೋನ್‌ಗಳು ಮತ್ತು ಇ-ರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ.