ಟಿಯಾಂಜಿನ್: ಚೀನಾದ ಟಿಯಾಂಜಿನ್‌ನಲ್ಲಿ ನಡೆಯುತ್ತಿರುವ ಶಾಂಘೈ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರೊಂದಿಗೆ ನಡೆಸಿದ ಸೌಹಾರ್ದಯುತ ಮಾತುಕತೆ ಜಾಗತಿಕ ಗಮನ ಸೆಳೆದಿದೆ. ಆದರೆ, ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಮೂಲೆಗುಂಪಾದಂತೆ ಕಂಡ ಪ್ರಸಂಗವೂ ನಡೆದಿದೆ.
ಶೃಂಗಸಭೆಯ ವಿಡಿಯೋವೊಂದರಲ್ಲಿ, ಪ್ರಧಾನಿ ಮೋದಿ ಮತ್ತು ಪುಟಿನ್ ಅವರು ಅನೌಪಚಾರಿಕವಾಗಿ ಉತ್ಸಾಹದಿಂದ ಮಾತನಾಡುತ್ತಾ ಮುಂದೆ ಸಾಗುತ್ತಿದ್ದರೆ, ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಅವರು ಗಂಟಿಕ್ಕಿದ ಮುಖಭಾವದಿಂದ ದೂರದಲ್ಲಿ ನಿಂತು ನೋಡುತ್ತಿರುವುದು ಕಂಡುಬಂದಿದೆ. ಈ ದೃಶ್ಯವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇದಕ್ಕೂ ಮುನ್ನ, ಶೃಂಗಸಭೆಯ ನಾಯಕರ ‘ಫ್ಯಾಮಿಲಿ ಫೋಟೋ’ದಲ್ಲಿಯೂ ಪ್ರಧಾನಿ ಮೋದಿ ಮತ್ತು ಶೆಹಬಾಜ್ ಷರೀಫ್ ಅವರು ಪರಸ್ಪರ ಅಂತರ ಕಾಯ್ದುಕೊಂಡು ದೂರ ದೂರದಲ್ಲೇ ನಿಂತಿದ್ದು ಕೂಡ ಗಮನ ಸೆಳೆದಿತ್ತು. ಅಲ್ಲದೆ, ಅವರಿಬ್ಬರೂ ಪರಸ್ಪರ ಮುಗುಳ್ನಕ್ಕ ಅಥವಾ ಹಸ್ತಲಾಘವ ಮಾಡಿದ ವಿದ್ಯಮಾನವೂ ನಡೆದಿಲ್ಲ.
ಭಾರತ-ಪಾಕ್ ನಡುವಿನ ಉದ್ವಿಗ್ನತೆ
ಈ ವರ್ಷದ ಆರಂಭದಲ್ಲಿ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾದ ಸಹ ಸಂಘಟನೆಯಾದ ‘ದಿ ರೆಸಿಸ್ಟೆನ್ಸ್ ಫ್ರಂಟ್’ ನಡೆಸಿದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಿದೆ. ಈ ದಾಳಿಯಲ್ಲಿ 26 ಜನರು ಮೃತಪಟ್ಟಿದ್ದರು. ಈ ಘಟನೆಯ ಹಿನ್ನೆಲೆಯಲ್ಲಿ ಇಬ್ಬರು ನಾಯಕರ ನಡುವಿನ ಅಂತರವು ಮತ್ತಷ್ಟು ಮಹತ್ವ ಪಡೆದಿದೆ.
ಪ್ರಧಾನಿ ಮೋದಿ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ, ಅಧ್ಯಕ್ಷ ಪುಟಿನ್ ಮತ್ತು ಅಧ್ಯಕ್ಷ ಕ್ಸಿ ಅವರೊಂದಿಗಿನ ಫೋಟೋಗಳನ್ನು ಹಂಚಿಕೊಂಡು, “ಟಿಯಾಂಜಿನ್‌ನಲ್ಲಿ ಸಂವಾದ ಮುಂದುವರಿದಿದೆ! ಎಸ್‌ಸಿಒ ಶೃಂಗಸಭೆಯ ಸಂದರ್ಭದಲ್ಲಿ ಅಧ್ಯಕ್ಷ ಪುಟಿನ್ ಮತ್ತು ಅಧ್ಯಕ್ಷ ಕ್ಸಿ ಅವರೊಂದಿಗೆ ಹಲವು ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು,” ಎಂದು ಬರೆದುಕೊಂಡಿದ್ದಾರೆ.



















