ರಾಯ್ಪುರ/ಸುಕ್ಮಾ : ದೇಶವನ್ನು ನಕ್ಸಲ್ ಮುಕ್ತಗೊಳಿಸುವ ಕೇಂದ್ರ ಸರ್ಕಾರದ ಶಪಥವು ಸಾಕಾರಗೊಳ್ಳುವತ್ತ ಸಾಗುತ್ತಿದ್ದು, ಇದೀಗ ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಮಾವೋವಾದಿಗಳ ನಡುವೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಕನಿಷ್ಠ 12 ಮಂದಿ ನಕ್ಸಲರು ಹತ್ಯೆಯಾಗಿದ್ದಾರೆ.
ಘಟನಾ ಸ್ಥಳದಿಂದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಶುಕ್ರವಾರ ಸಂಜೆ ಸುಕ್ಮಾದ ಜಿಲ್ಲಾ ಮೀಸಲು ಪಡೆ (DRG) ಕಿಸ್ಟಾರಂ ಪೊಲೀಸ್ ಠಾಣಾ ವ್ಯಾಪ್ತಿಯ ಪಾಲೋಡಿ ಮತ್ತು ಪೋಟಕ್‌ಪಲ್ಲಿ ಪ್ರದೇಶಗಳಲ್ಲಿ ಈ ಕಾರ್ಯಾಚರಣೆಯನ್ನು ಆರಂಭಿಸಿತ್ತು. ಸುಕ್ಮಾದ ಕಿಸ್ಟಾರಂ ಪ್ರದೇಶದ ಪಮ್ಲೂರ್ ಗ್ರಾಮದ ಬಳಿ ಭದ್ರತಾ ಪಡೆಗಳು ನಕ್ಸಲರನ್ನು ಸುತ್ತುವರಿದಿದ್ದು, ಈ ವೇಳೆ ಎನ್‌ಕೌಂಟರ್ ನಡೆದಿದೆ. ಸುಕ್ಮಾ ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಚವಾಣ್ ಈ ಕಾರ್ಯಾಚರಣೆಯ ಉಸ್ತುವಾರಿ ವಹಿಸಿದ್ದರು.
ಪ್ರಮುಖ ನಾಯಕನ ಅಂತ್ಯ
ಗುಂಡಿನ ಚಕಮಕಿಯಲ್ಲಿ ಹಲವು ನಕ್ಸಲರು ಹತರಾಗಿದ್ದು, ಈ ಪೈಕಿ ಕೊಂಟಾ ವಲಯ ಸಮಿತಿಯ ಕಾರ್ಯದರ್ಶಿ ಮಂಗ್ಡು ಕೂಡ ಸೇರಿದ್ದಾನೆ. ಹತ್ಯೆಯಾದ ಇತರ ನಕ್ಸಲರ ಗುರುತು ಪತ್ತೆ ಹಚ್ಚುವ ಕಾರ್ಯ ಮುಂದುವರೆದಿದೆ. ಸ್ಥಳದಿಂದ ಎಕೆ-47 ಮತ್ತು ಇನ್ಸಾಸ್ ರೈಫಲ್‌ಗಳು ಸೇರಿದಂತೆ ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿವೆ.
ಬಿಜಾಪುರದಲ್ಲೂ ಇಬ್ಬರ ಹತ್ಯೆ
ಇದೇ ವೇಳೆ, ಬಿಜಾಪುರ ಜಿಲ್ಲೆಯಲ್ಲಿ ನಡೆದ ಮತ್ತೊಂದು ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ಇಬ್ಬರು ನಕ್ಸಲರನ್ನು ಹೊಡೆದುರುಳಿಸಲಾಗಿದೆ. ಇಂದು ಬೆಳಗ್ಗೆ 5 ಗಂಟೆಯ ಸುಮಾರಿಗೆ ಜಿಲ್ಲೆಯ ದಕ್ಷಿಣ ಭಾಗದ ಅರಣ್ಯ ಪ್ರದೇಶದಲ್ಲಿ ಡಿಆರ್‌ಜಿ ಪಡೆಗಳು ಕಾರ್ಯಾಚರಣೆ ನಡೆಸುತ್ತಿದ್ದಾಗ ಈ ಘಟನೆ ನಡೆದಿದೆ.
ಕಳೆದ ವರ್ಷ 285 ನಕ್ಸಲರ ಸಾವು
ಭದ್ರತಾ ಪಡೆಗಳು ನಕ್ಸಲ್ ನಿಗ್ರಹ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ಕಳೆದ ಒಂದು ವರ್ಷದಲ್ಲಿ ಛತ್ತೀಸ್‌ಗಢದಲ್ಲಿ ನಡೆದ ವಿವಿಧ ಎನ್‌ಕೌಂಟರ್‌ಗಳಲ್ಲಿ ಒಟ್ಟು 285 ನಕ್ಸಲರು ಹತರಾಗಿದ್ದಾರೆ. ಇದರಲ್ಲಿ ಬಿಜಾಪುರ ಸೇರಿದಂತೆ ಏಳು ಜಿಲ್ಲೆಗಳನ್ನು ಒಳಗೊಂಡಿರುವ ಬಸ್ತಾರ್ ವಿಭಾಗವೊಂದರಲ್ಲೇ 257 ನಕ್ಸಲರನ್ನು ಮಟ್ಟಹಾಕಲಾಗಿದೆ ಎಂದು ಅಂಕಿಅಂಶಗಳು ತಿಳಿಸಿವೆ.
ಇದನ್ನೂ ಓದಿ : ಸೈಕಾಲಜಿಕಲ್ ಥ್ರಿಲ್ಲರ್ ಹಬ್ಬ ‘ವಿಕಲ್ಪ’



















