ಬೆಂಗಳೂರು: ಹಳೆಯ ಪಿಂಚಣಿ ಯೋಜನೆ ಜಾರಿಗೆ ದೇಶದ ಹಲವೆಡೆ ಒತ್ತಾಯ ಕೇಳಿಬರುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರವು ನಿರ್ದಿಷ್ಟ ವರ್ಗದ ಸರ್ಕಾರಿ ನೌಕರರಿಗೆ ಹಳೇ ಪಿಂಚಣಿ ಯೋಜನೆಗೆ (OPS) ಮರಳಲು ಅವಕಾಶ ಕಲ್ಪಿಸಿದೆ. ಇದಕ್ಕೆ ಸಂಬಂಧಿಸಿದಂತೆ ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ (DoPPW) ಆದೇಶ ಹೊರಡಿಸಿದೆ.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (NPS) ಜಾರಿಗೆ ಬರುವ ಮುನ್ನ ಅಂದರೆ ಜನವರಿ 1, 2004ಕ್ಕೂ ಮೊದಲು ಅನುಕಂಪದ ಆಧಾರದ ಮೇಲೆ ನೇಮಕಾತಿಗಾಗಿ ಅರ್ಜಿ ಸಲ್ಲಿಸಿದ್ದು, ಆದರೆ ತಾಂತ್ರಿಕ ಕಾರಣಗಳಿಂದ ಅಥವಾ ವಿಳಂಬದಿಂದ ಆ ನಂತರ ಹುದ್ದೆಗೆ ಸೇರಿಕೊಂಡ ನೌಕರರಿಗೆ ಮಾತ್ರ ಈ ವಿನಾಯಿತಿ ನೀಡಲಾಗಿದೆ.
ಹೀಗೆ ನೇಮಕಾತಿ ಹೊಂದಿದವರಿಗೆ ಎನ್ ಪಿಎಸ್ ವ್ಯಾಪ್ತಿಗೆ ಸೇರಿಸಲಾಗಿತ್ತು. ಆದರೆ ಇತ್ತೀಚಿನ ಹೊಸ ಆದೇಶದ ಪ್ರಕಾರ, ನೇಮಕಾತಿ ದಿನಾಂಕಕ್ಕಿಂತ ಬದಲಾಗಿ ಅರ್ಜಿಯನ್ನು ಸಲ್ಲಿಸಿದ ದಿನಾಂಕವನ್ನೇ ಪರಿಗಣಿಸಿ ಹಳೇ ಪಿಂಚಣಿ ಯೋಜನೆಗೆ (OPS) ಅರ್ಹರನ್ನಾಗಿ ಪರಿಗಣಿಸಲಾಗುತ್ತದೆ.
ಯಾರು ಅರ್ಹರು?
• ಜನವರಿ 1, 2004ಕ್ಕಿಂತ ಮೊದಲು ಮಾನವೀಯ ಆಧಾರದ ಮೇಲಿನ ನೇಮಕಾತಿಗಾಗಿ ಅರ್ಜಿ ಸಲ್ಲಿಸಿರಬೇಕು.
• ಅಂದು ನಿಗದಿಪಡಿಸಿದ ಎಲ್ಲ ಅರ್ಹತಾ ಮಾನದಂಡಗಳನ್ನು ಪೂರೈಸಿರಬೇಕು.
• ಈ ಸೌಲಭ್ಯವು ಎಲ್ಲ ಕೇಂದ್ರ ನೌಕರರಿಗಾಗಲಿ ಅಥವಾ ಸಾಮಾನ್ಯ ಎನ್ ಪಿ ಎಸ್ ಚಂದಾದಾರರಿಗಾಗಲಿ ಲಭ್ಯವಿಲ್ಲ. ಕೇವಲ DoPPW ನಿಗದಿಪಡಿಸಿದ ನಿಯಮಗಳನ್ನು ಪೂರೈಸುವ ನಿರ್ದಿಷ್ಟ ನೌಕರರಿಗೆ ಮಾತ್ರ ಇದು ಅನ್ವಯಿಸುತ್ತದೆ.
ಅನುಕಂಪದ ಆಧಾರದ ಮೇಲೆ ನೇಮಕಾತಿ ಹೊಂದಿರುವ ನೌಕರರು ಆಗಸ್ಟ್ 31ರೊಳಗೆ ಎನ್ ಪಿಎಸ್ ಬದಲಾಗಿ ಒಪಿಎಸ್ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳಬಹುದು. ಗಡುವಿನೊಳಗೆ ಆಯ್ಕೆ ಮಾಡಿಕೊಳ್ಳದಿದ್ದರೆ ಎನ್ ಪಿಎಸ್ ಯೋಜನೆಯಲ್ಲಿಯೇ ಮುಂದುವರಿಯಬೇಕಾಗುತ್ತದೆ ಎಂದು ಕೂಡ ಸ್ಪಷ್ಟಪಡಿಸಿದೆ.



















