ಬೆಂಗಳೂರು : ಕೆಲ ದಿನಗಳ ಹಿಂದಷ್ಟೇ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA)ವು ಎನ್ಪಿಎಸ್ ಸಂಚಯ್ (NPS Sanchay) ಎಂಬ ಯೋಜನೆಗೆ ಚಾಲನೆ ನೀಡಿದೆ. ದೇಶದ ಅಸಂಘಟಿತ ವಲಯದ ಕಾರ್ಮಿಕರಿಗೆ 60 ವರ್ಷದ ಬಳಿಕ ಪಿಂಚಣಿ ನೀಡುವ ಯೋಜನೆ ಇದಾಗಿದ್ದು, ಕೋಟ್ಯಂತರ ಕಾರ್ಮಿಕರಿಗೆ ಇದು ವರದಾನವಾಗಲಿದೆ. ಹಾಗಾದರೆ, ಏನಿದು ಎನ್ ಪಿಎಸ್ ಪಿಂಚಣಿ ಯೋಜನೆ? ಇದರ ಲಾಭ ಏನೇನು? ಯಾರೆಲ್ಲ ಇದಕ್ಕೆ ಅರ್ಹರು ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
ಏನಿದು ಯೋಜನೆ?
ಇದು ರಾಷ್ಟ್ರೀಯ ಪೆನ್ಷನ್ ಯೋಜನೆಯ (NPS) ಅಡಿಯಲ್ಲಿ ಬರುವ ಒಂದು ಸರಳೀಕೃತ ಉಳಿತಾಯ ಯೋಜನೆಯಾಗಿದೆ. ವಿಶೇಷವಾಗಿ ಅಸಂಘಟಿತ ವಲಯದ ಕಾರ್ಮಿಕರು ಮತ್ತು ಕಡಿಮೆ ಆದಾಯ ಹೊಂದಿರುವವರು ನಿವೃತ್ತಿಗಾಗಿ ಹಣ ಉಳಿಸಲು ಇದನ್ನು ಜಾರಿಗೊಳಿಸಲಾಗಿದೆ. ಸರ್ಕಾರಿ ಹಾಗೂ ಖಾಸಗಿ ಕಂಪನಿ ಉದ್ಯೋಗಿಗಳಿಗೆ ಪಿಎಫ್, ಗ್ರಾಚ್ಯುಟಿ ಸೇರಿ ಹಲವು ಸಾಮಾಜಿಕ ಭದ್ರತಾ ಯೋಜನೆಗಳು ಇರುತ್ತವೆ. ಆದರೆ, ಅಸಂಘಟಿತ ವಲಯದ ಕಾರ್ಮಿಕರಿಗೆ ಇಂತಹ ಸೌಲಭ್ಯಗಳು ಇರುವುದಿಲ್ಲ. ಹಾಗಾಗಿ, ಯೋಜನೆ ಜಾರಿಗೊಳಿಸಲಾಗಿದೆ.
ಯಾರೆಲ್ಲ ಪ್ರಯೋಜನ ಪಡೆಯಬಹುದು?
ಅಸಂಘಟಿತ ವಲಯದ ಕಾರ್ಮಿಕರು ಮಾತ್ರ ಯೋಜನೆಯ ಲಾಭ ಪಡೆಯಬಹುದು. 18 ರಿಂದ 40 ವರ್ಷದೊಳಗಿನ ಕಾರ್ಮಿಕರು ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದು. ಈ ಯೋಜನೆಯಲ್ಲಿ ಹೂಡಿಕೆದಾರರು ತಿಂಗಳಿಗೆ ಕನಿಷ್ಠ 250 ರೂಪಾಯಿಗಳಿಂದ ಹೂಡಿಕೆ ಆರಂಭಿಸಬಹುದು. ಹೂಡಿಕೆದಾರರು ತಮ್ಮ ಹಣವನ್ನು ಸರ್ಕಾರಿ ಬಾಂಡ್ ಗಳು, ಕಾರ್ಪೊರೇಟ್ ಬಾಂಡ್ ಗಳು ಅಥವಾ ಈಕ್ವಿಟಿಗಳಲ್ಲಿ (ಷೇರು ಮಾರುಕಟ್ಟೆ) ಹೂಡಿಕೆ ಮಾಡುವ ಆಯ್ಕೆ ಹೊಂದಿರುತ್ತಾರೆ.
ಎಷ್ಟು ಸಿಗಲಿದೆ ಪಿಂಚಣಿ?
60 ವರ್ಷ ತುಂಬಿದ ನಂತರ, ಹೂಡಿಕೆದಾರರು ಒಟ್ಟು ಮೊತ್ತದ ಒಂದು ಭಾಗವನ್ನು ಹಿಂಪಡೆಯಬಹುದು ಮತ್ತು ಉಳಿದ ಭಾಗವನ್ನು ಮಾಸಿಕ ಪಿಂಚಣಿಯಾಗಿ ಪಡೆಯಬಹುದು. ಕಾರ್ಮಿಕರು 60 ವರ್ಷದವರೆಗೆ ಹೂಡಿಕೆ ಮಾಡಿದ ಮೊತ್ತದ ಆಧಾರದ ಮೇಲೆ ಮಾಸಿಕ 1 ಸಾವಿರ ರೂ.ನಿಂದ 5 ಸಾವಿರ ರೂ.ವರೆಗೆ ಪಿಂಚಣಿ ಪಡೆಯಲಿದ್ದಾರೆ.
ಹಾಗೆಯೇ, ತುರ್ತು ಸಂದರ್ಭಗಳಲ್ಲಿ ಅಂದರೆ, ಶಿಕ್ಷಣ, ಅನಾರೋಗ್ಯ ಅಥವಾ ಮನೆ ಖರೀದಿ ವೇಳೆ ನಿಯಮಿತ ಷರತ್ತುಗಳ ಅಡಿಯಲ್ಲಿ ಹಣವನ್ನು ಭಾಗಶಃ ಹಿಂಪಡೆಯಲು ಅವಕಾಶವಿದೆ. https://enps.nps-proteantech.in ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಯೋಜನೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಇದನ್ನೂ ಓದಿ : ಕೋಲಾರ ಗಡಿಯಲ್ಲಿ ಮೆಷಿನ್ ಗನ್‌ನ 214 ಬುಲೆಟ್‌ಗಳು ಪತ್ತೆ!


















