ನವದೆಹಲಿ: ಆಪರೇಷನ್ ಸಿಂಧೂರ ನಿಲ್ಲಿಸುವಂತೆ ವಿಶ್ವದ ಯಾವ ನಾಯಕನೂ ಸಲಹೆ ನೀಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಆಪರೇಷನ್ ಸಿಂಧೂರ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆ ವೇಳೆ ಮಾತನಾಡಿದ ಅವರು, ಭಾರತ-ಪಾಕ್ (India-Pakistan) ನಡುವಿನ ಕದನ ವಿರಾಮ ವಿಚಾರವಾಗಿ ಟ್ರಂಪ್ ಮಾತು ಹಾಗೂ ವಿಪಕ್ಷಗಳ ಆರೋಪಕ್ಕೆ ಕಿಡಿಕಾರಿದ್ದಾರೆ. ಅಮೆರಿಕ ಉಪಾಧ್ಯಕ್ಷ ಪಾಕ್ ದೊಡ್ಡ ದಾಳಿ ಮಾಡಲಿದೆ ಎಂದಿದ್ದರು. ಪಾಕ್ ದಾಳಿ ಮಾಡಿದರೆ ನಾವು ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿದ್ದೆ. ಅಮೆರಿಕ ಉಪಾಧ್ಯಕ್ಷ ನನ್ನ ಜೊತೆಗೆ ಮಾತನಾಡಲು ಪ್ರಯತ್ನಿಸಿದರು. ಪಾಕಿಸ್ತಾನ ದೊಡ್ಡ ದಾಳಿ ಮಾಡಲಿದೆ ಎಂದು ಎಚ್ಚರಿಕೆ ನೀಡಿದರು. ಅವರ ಉದ್ದೇಶ ದಾಳಿಯಾಗಿದ್ದರೆ, ಅದು ಅವರಿಗೆ ದುಬಾರಿಯಾಗಲಿದೆ ಎಂದು ಉತ್ತರಿಸಿದ್ದೆ. ನಾವು ಅದಕ್ಕಿಂತ ದೊಡ್ಡ ದಾಳಿ ನಡೆಸಿ ಉತ್ತರ ಕೊಡುತ್ತೇವೆ. ಗುಂಡಿನ ಉತ್ತರ ಗುಂಡಿನಿಂದಲೇ ಕೊಡುತ್ತೇವೆ ಎಂದು ಹೇಳಿದ್ದೆ ಎಂದು ಲೋಕಸಭೆಯಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.
ಪೆಹಲ್ಗಾಮ್ ದಾಳಿಯ ನಂತರ ಪಾಕ್ ಗೆ ಭಾರತದ ಪ್ರತಿದಾಳಿಯ ಕುರಿತು ಗೊತ್ತಿತ್ತು. ಹೀಗಾಗಿ ಪರಮಾಣು ದಾಳಿಯ ಬೆದರಿಕೆ ಬರಲು ಆರಂಭಿಸಿದ್ದವು. ಆದರೆ, ಪಾಕ್ ಗೆ ಏನೂ ಮಾಡಲು ಆಗಲಿಲ್ಲ. ಪೆಹಲ್ಗಾಮ್ ದಾಳಿಗೆ ಸೇನೆ ಪ್ರತಿಕಾರ ತೀರಿಸಿಕೊಂಡಿತು. ಪೆಹಲ್ಗಾಮ್‌ನಲ್ಲಿ ಧರ್ಮ ಕೇಳಿ ಗುಂಡು ಹಾರಿಸಲಾಯಿತು. ಇದು ಕ್ರೂರತೆಯ ಪರಾಕಾಷ್ಠೆಯಾಗಿತ್ತು. ಭಾರತವನ್ನು ಹಿಂಸೆಯ ಬೆಂಕಿಯಲ್ಲಿ ಹಾಕುವುದು, ದಂಗೆ ಎಬ್ಬಿಸುವುದು ಆ ಘಟನೆಯ ಉದ್ಧೇಶವಾಗಿತ್ತು. ಆ ಉದ್ದೇಶವನ್ನು ದೇಶದ ಜನರು ಸುಳ್ಳು ಮಾಡಿದರು ಎಂದಿದ್ದಾರೆ.
ಘಟನೆಯ ನಂತರ ಸೇನೆಗೆ ಸಂಪೂರ್ಣ ಸ್ವಾತಂತ್ರ‍್ಯ ನೀಡಲಾಯಿತು. ಸೇನೆ ಎಲ್ಲಿ ಹೇಗೆ ಬೇಕಾದರೂ ದಾಳಿ ಮಾಡಬಹುದು ಎನ್ನುವ ಸ್ವಾತಂತ್ರ‍್ಯವೂ ನೀಡಲಾಯಿತು. ನಮ್ಮ ಸೇನೆ ಭಯೋತ್ಪಾದಕರಿಗೆ ಶಿಕ್ಷೆ ನೀಡಿದೆ ಎಂದು ಹೇಳಿದ್ದಾರೆ. ನಮ್ಮ ದಾಳಿಯಿಂದ ಪಾಕ್ ಏರ್‌ಬೇಸ್ ಐಸಿಯು ನಲ್ಲಿವೆ. ಆಪರೇಷನ್ ಸಿಂಧೂರದಲ್ಲಿ ಸಫಲತೆ ಸಿಕ್ಕಿದೆ ಎಂದು ಹೇಳಿದ್ದಾರೆ.