ಬೆಂಗಳೂರು: ಎಟಿಎಂಗಳಲ್ಲಿ ಯಾವಾಗ ಹಣ ಡ್ರಾ ಮಾಡಿದರೂ 500 ರೂಪಾಯಿ ಮೌಲ್ಯದ ನೋಟುಗಳೇ ಸಿಗುತ್ತವೆ. ಬಹುತೇಕ ಬ್ಯಾಂಕ್ ಗಳ ಎಟಿಎಂಗಳಲ್ಲಿ 100, 200 ರೂಪಾಯಿ ಮುಖಬೆಲೆಯ ನೋಟುಗಳ ಸಮಸ್ಯೆ ಕಾಡುತ್ತಿರುತ್ತದೆ. ಆದರೆ, ಇದನ್ನು ಮನಗಂಡಿರುವ ಭಾರತೀಯ ರಿಸರ್ವ್ ಬ್ಯಾಂಕ್, ಎಟಿಎಂಗಳಲ್ಲಿ 100 ರೂ. ಹಾಗೂ 200 ರೂ. ಮುಖಬೆಲೆಯ ನೋಟುಗಳನ್ನೇ ಜಾಸ್ತಿ ಇರುವಂತೆ ನೋಡಿಕೊಳ್ಳಬೇಕು ಎಂದು ಬ್ಯಾಂಕುಗಳಿಗೆ ಸೂಚನೆ ನೀಡಿದೆ.
ಆರ್ ಬಿಐ ಹೊಸ ಆದೇಶದಿಂದ ಜನಸಾಮಾನ್ಯರಿಗೆ, ಸಣ್ಣ ವ್ಯಾಪಾರಿಗಳಿಗೆ ಮತ್ತು ದಿನಸಿ ಅಂಗಡಿಗಳಿಗೆ ಹೋಗುವವರಿಗೆ ಹೆಚ್ಚು ಉಪಯುಕ್ತವಾಗಲಿದೆ. ಒಬ್ಬ ವ್ಯಕ್ತಿಯು ಒಂದು ಸಾವಿರ ರೂಪಾಯಿ ತೆಗೆಯಲು ಹೋದರೆ, ಎರಡು 500 ರೂಪಾಯಿ ನೋಟುಗಳು ಬರುತ್ತವೆ. ಆದರೆ 100 ರೂಪಾಯಿ ನೋಟುಗಳು ಹೆಚ್ಚಿನ ಸಂದರ್ಭದಲ್ಲಿ ಬೇಕಾಗಿರುತ್ತದೆ. ಹೊರಗೆ 500 ರೂ. ಮುಖಬೆಲೆಯ ನೋಟಿಗೆ ಚಿಲ್ಲರೆ ಸಮಸ್ಯೆ ಇರುತ್ತದೆ. ಇದಕ್ಕೆ ಪರಿಹಾರವಾಗಿ ಆರ್ ಬಿ ಐ ಈಗ ಕಡಿಮೆ ಮೊತ್ತದ ನೋಟುಗಳನ್ನು ಹೆಚ್ಚಿಸುವಂತೆ ಸೂಚಿಸಿದೆ.
ಎಲ್ಲ ಬ್ಯಾಂಕುಗಳಿಗೆ ಮತ್ತು ವೈಟ್-ಲೇಬಲ್ ಎಟಿಎಂ ಆಪರೇಟರ್ಗಳಿಗೆ ಈ ಕುರಿತು ನಿರ್ದೇಶನ ನೀಡಿದೆ. 2025 ಸೆಪ್ಟೆಂಬರ್ 30ರಿಂದ ಶೇ.75ರಷ್ಟು ಎಟಿಎಂಗಳಲ್ಲಿ ಕನಿಷ್ಠ ಒಂದು ಕ್ಯಾಸೆಟ್ ನಲ್ಲಿ 100 ಮತ್ತು 200 ರೂಪಾಯಿ ನೋಟುಗಳು ಲಭ್ಯವಿರಬೇಕು ಎಂದು ಆರ್ ಬಿ ಐ ಸೂಚಿಸಿದೆ. ಅಂದರೆ, ಹೆಚ್ಚಿನ ಎಟಿಎಂಗಳಲ್ಲಿ ಈ ನೋಟುಗಳು ಲಭ್ಯವಾಗುತ್ತವೆ. ಇದರ ನಂತರ, 2026 ಮಾರ್ಚ್ 31ರ ವೇಳೆಗೆ ಈ ಸೌಲಭ್ಯ ಶೇ.90ರಷ್ಟು ಎಟಿಎಂಗಳಿಗೆ ವಿಸ್ತರಣೆಯಾಗಬೇಕು ಎಂದು ಸೂಚಿಸಿದೆ.
ಮತ್ತೊಂದೆಡೆ, ಎಟಿಎಂ ಇಂಟರ್ ಚೇಂಜ್ ಶುಲ್ಕ ಹೆಚ್ಚಿಸಲು ಆರ್ ಬಿಐ ಅನುಮೋದನೆ ನೀಡಿದ ಕಾರಣ ಎಟಿಎಂಗಳಲ್ಲಿ ಗ್ರಾಹಕರು ಮೇ 1ರಿಂದ ಹಣ ವಿತ್ ಡ್ರಾ ಮಾಡಿದರೆ ಹೆಚ್ಚುವರಿ ಶುಲ್ಕ ಪಾವತಿ ಮಾಡಬೇಕಾಗುತ್ತದೆ. ತಿಂಗಳಿಗೆ ಐದು ಬಾರಿ ಉಚಿತವಾಗಿ ಹಣ ವಿತ್ ಡ್ರಾ ಮಾಡುವ ಮಿತಿಯನ್ನು ಮೀರಿದರೆ ಪ್ರತಿ ವಿತ್ ಡ್ರಾಗೆ 23 ರೂಪಾಯಿ ಶುಲ್ಕ ಪಾವತಿಸಬೇಕಾಗುತ್ತದೆ. ಇದಕ್ಕೂ ಮೊದಲು 21 ರೂಪಾಯಿ ಶುಲ್ಕ ಇತ್ತು.