ಅಲಾಸ್ಕಾ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವೆ ಶುಕ್ರವಾರ ತಡರಾತ್ರಿ (ಭಾರತೀಯ ಕಾಲಮಾನ) ಅಲಾಸ್ಕಾದಲ್ಲಿ ನಡೆದ ಬಹುನಿರೀಕ್ಷಿತ ಮಾತುಕತೆಯು ಯಾವುದೇ ನಿರ್ದಿಷ್ಟ ಒಪ್ಪಂದಕ್ಕೆ ಬರಲಾಗದೇ ಅಂತ್ಯಗೊಂಡಿದೆ. ಈ ಮಾತುಕತೆಯನ್ನು ಉಭಯ ನಾಯಕರು ‘ಅತ್ಯಂತ ಫಲಪ್ರದ’ ಎಂದು ಕರೆದರೂ ಉಕ್ರೇನ್ ಸಂಘರ್ಷಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಯಾವುದೇ ನಿರ್ಣಯಕ್ಕೆ ಬರುವಲ್ಲಿ ಈ ಮಾತುಕತೆ ವಿಫಲವಾಗಿದೆ.
ಸಭೆಯ ಬಳಿಕ ಮಾತನಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, “ಒಪ್ಪಂದ ಆಗುವವರೆಗೆ ಯಾವುದೇ ಒಪ್ಪಂದವಿಲ್ಲ” ಎಂದು ಹೇಳುವ ಮೂಲಕ ಸಭೆಯಲ್ಲಿ ಯಾವುದೇ ನಿರ್ಣಾಯಕ ಒಪ್ಪಂದಕ್ಕೆ ಬರದಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಇನ್ನೊಂದೆಡೆ ಪುಟಿನ್ ಕೂಡ ಮಾತುಕತೆ “ಸಮಗ್ರ ಮತ್ತು ಉಪಯುಕ್ತ” ಎಂದು ಬಣ್ಣಿಸಿದ್ದಾರೆ.
“ನಾವು ಅತ್ಯಂತ ಫಲಪ್ರದ ಸಭೆ ನಡೆಸಿದ್ದೇವೆ ಮತ್ತು ಅನೇಕ ಅಂಶಗಳು ಒಪ್ಪಿಗೆಗೆ ಬಂದಿವೆ. ಕೆಲವೇ ಕೆಲವು ವಿಚಾರಗಳು ಉಳಿದಿವೆ. ನಾವು ಅಲ್ಲಿಗೆ ಇನ್ನೂ ತಲುಪಿಲ್ಲ, ಆದರೆ ಅಲ್ಲಿಗೆ ತಲುಪಲು ಉತ್ತಮ ಅವಕಾಶವಿದೆ” ಎಂದು ಟ್ರಂಪ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮತ್ತೊಂದೆಡೆ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, “ಮಾತುಕತೆಗಳು ರಚನಾತ್ಮಕ ಮತ್ತು ಪರಸ್ಪರ ಗೌರವಯುತ ವಾತಾವರಣದಲ್ಲಿ ನಡೆದವು. ಬಹಳ ಸಮಗ್ರ ಮತ್ತು ಉಪಯುಕ್ತವಾಗಿದ್ದವು. ನಾವು ತಲುಪಿದ ತಿಳುವಳಿಕೆಯು ಉಕ್ರೇನ್‌ನಲ್ಲಿ ಶಾಂತಿಗೆ ದಾರಿ ಮಾಡಿಕೊಡುತ್ತದೆ ಎಂದು ನಾವು ಭಾವಿಸುತ್ತೇವೆ” ಎಂದು ಹೇಳಿದ್ದಾರೆ.
ಇದೇ ವೇಳೆ ಪುಟಿನ್, “ಪ್ರಚೋದನೆ ಅಥವಾ ತೆರೆಮರೆಯ ಕುತಂತ್ರಗಳ ಮೂಲಕ ಉದಯೋನ್ಮುಖ ಪ್ರಗತಿಯನ್ನು ಅಡ್ಡಿಪಡಿಸುವ ಪ್ರಯತ್ನಗಳ” ಬಗ್ಗೆ ಎಚ್ಚರಿಕೆಯನ್ನೂ ನೀಡಿದ್ದಾರೆ.
ಅಲಾಸ್ಕಾದ ಅತಿ ದೊಡ್ಡ ಮಿಲಿಟರಿ ನೆಲೆಯಾದ ಜಾಯಿಂಟ್ ಬೇಸ್ ಎಲ್ಮೆಂಡಾರ್ಫ್-ರಿಚರ್ಡ್ಸನ್ ನಲ್ಲಿ ಈ ಮಾತುಕತೆ ನಡೆದಿದೆ.