ಬೆಂಗಳೂರು: ಬೆಳಗ್ಗೆ ಬೇಗ ಎದ್ದು, ಅವಸರದಲ್ಲೇ ತಿಂಡಿ ತಿಂದು, ಟ್ರಾಫಿಕ್ ಕಿರಿಕಿರಿ ಅನುಭವಿಸಿ ಕಚೇರಿ ತಲುಪುತ್ತೇವೆ. ದಿನವಿಡೀ ಕೆಲಸ ಮಾಡಿ, ಅದೇ ಟ್ರಾಫಿಕ್ ಕಿರಿಕಿರಿಯಲ್ಲೇ ಮನೆಗೆ ಬಂದು ‘ಉಸ್ಸಪ್ಪಾ’ ಅನ್ನೋವಷ್ಟರಲ್ಲಿ ಬಾಸ್ ಮತ್ತೆ ಕರೆ ಮಾಡುತ್ತಾನೆ. ಇ-ಮೇಲ್ ಮಾಡಿ ಜೀವ ತಿನ್ನುತ್ತಾನೆ. ಆದರೆ, ಇನ್ನುಮುಂದೆ ಇಂತಹ ಕಿರಿಕಿರಿ ಇರೋದಿಲ್ಲ. ಹೇಗೆ ಅಂತೀರಾ? ಈ ಲೇಖನವನ್ನು ಪೂರ್ತಿ ಓದಿ.
ಹೌದು, ಎನ್ ಸಿಪಿ ಸಂಸದೆ ಸುಪ್ರಿಯಾ ಸುಳೆ ಅವರು ರೈಟ್ ಟು ಡಿಸ್ ಕನೆಕ್ಟ್ ಬಿಲ್-2025ಅನ್ನು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಇದರ ಅನ್ವಯ, ಯಾವುದೇ ಒಬ್ಬ ಉದ್ಯೋಗಿಯು ಕಚೇರಿಯಿಂದ ಮನೆಗೆ ಬಂದ ಬಳಿಕ ಅಥವಾ ಕೆಲಸದ ಅವಧಿ ಮುಗಿದ ಬಳಿಕ ಆ ಕಂಪನಿಯ ಬಾಸ್ ಅಥವಾ ಮ್ಯಾನೇಜರ್ ಕರೆ ಮಾಡುವಂತಿಲ್ಲ, ಇ-ಮೇಲ್ ಮಾಡುವಂತಿಲ್ಲ ಎಂಬ ನಿಯಮಗಳಿವೆ.
ಹಾಗೊಂದು ವೇಳೆ, ಬಾಸ್ ಅಥವಾ ಮ್ಯಾನೇಜರ್ ಕರೆ ಮಾಡಿದರೂ ಉದ್ಯೋಗಿಯು ಅದಕ್ಕೆ ಉತ್ತರಿಸಬೇಕು ಎಂತಿಲ್ಲ. ಹೀಗೆ, ಕರೆ ಅಥವಾ ಇ-ಮೇಲ್ ಮಾಡಿದರೆ ಅದಕ್ಕೆ ಪ್ರತಿಕ್ರಿಯೆ ನೀಡದಿರುವ ಹಕ್ಕುಗಳನ್ನು ಹೊಸ ಮಸೂದೆಯು ನೀಡುತ್ತದೆ. ರಜಾ ದಿನಗಳಲ್ಲಿಯೂ ಬಾಸ್ ಗಳು ಕರೆ ಮಾಡಿ ಉದ್ಯೋಗಿಗಳಿಗೆ ತೊಂದರೆ ಕೊಡುವಂತಿಲ್ಲ ಎಂದು ತಿಳಿಸಲಾಗಿದೆ.
ತುರ್ತು ಸಂದರ್ಭಗಳಲ್ಲಿ ಉದ್ಯೋಗಿಯ ಅನುಮತಿಯೊಂದಿಗೆ ಮಾತ್ರ ಕರೆ ಮಾಡಬಹುದಾಗಿದೆ. ಇದರ ಹೊರತಾಗಿ, ಕಾಲ್ ಮಾಡುವುದು, ಎಸ್ಎಂಎಸ್, ವಾಟ್ಸ್ ಆ್ಯಪ್ ಮೆಸೇಜ್, ವೀಡಿಯೋ ಕಾಲ್, ವಾಟ್ಸ್ ಆ್ಯಪ್ ಕಾಲ್ ಸೇರಿ ಯಾವುದೇ ರೀತಿಯ ಸಂವಹನವನ್ನು ತಿರಸ್ಕರಿಸುವ ಹಕ್ಕುಗಳು ಉದ್ಯೋಗಿಗಳಿಗೆ ಇರುತ್ತದೆ. ಹೀಗೆ ಮಾಡಿದರೆ ಕಂಪನಿಯು ಯಾವುದೇ ಶಿಸ್ತು ಕ್ರಮ ತೆಗೆದುಕೊಳ್ಳುವಂತಿಲ್ಲ ಎಂದು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ. ಇದು ಖಾಸಗಿ ಮಸೂದೆಯಾಗಿದ್ದು, ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆಯಬೇಕು. ಇದಾದ ಬಳಿಕ ರಾಷ್ಟ್ರಪತಿಯವರು ಅಂಕಿತ ಹಾಕಿದರೆ, ಮಸೂದೆಯು ಕಾಯ್ದೆಯಾಗಿ ಜಾರಿಗೆ ಬರಲಿದೆ.
ಇದನ್ನೂ ಓದಿ; ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ 2 ಹುದ್ದೆಗಳು ಖಾಲಿ : ಕೂಡಲೇ ಅರ್ಜಿ ಸಲ್ಲಿಸಿ



















