ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿ (National Highways) ವಾಹನ ಚಲಾಯಿಸುವವರಿಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (NHAI) ಪ್ರಮುಖ ಎಚ್ಚರಿಕೆಯೊಂದನ್ನು ನೀಡಿದೆ. ನಿಮ್ಮ ವಾಹನದ ಥರ್ಡ್-ಪಾರ್ಟಿ ವಿಮೆ (Third-Party Insurance) ಅವಧಿ ಮುಕ್ತಾಯಗೊಂಡಿದ್ದರೆ ಅಥವಾ ನೀವು ವಿಮೆ ಮಾಡಿಸದಿದ್ದರೆ, ಇನ್ನು ಮುಂದೆ ಟೋಲ್ ಪ್ಲಾಜಾ ದಾಟಿದ ತಕ್ಷಣ ನಿಮ್ಮ ಮೊಬೈಲ್ ಗೆ ಎಸ್ಎಂಎಸ್ (SMS) ಸಂದೇಶ ಬರಲಿದೆ. ಹಾಗೆಯೇ, ದಂಡ ಕೂಡ ವಿಧಿಸಲಾಗುತ್ತದೆ.
ಚಾಲಕರು ತಮ್ಮ ವಾಹನಗಳ ದಾಖಲೆಗಳನ್ನು ಕಾಲಕಾಲಕ್ಕೆ ನವೀಕರಿಸುವಂತೆ ಪ್ರೋತ್ಸಾಹಿಸಲು ಪ್ರಾಧಿಕಾರವು ಈ ನವೀನ ವ್ಯವಸ್ಥೆಗೆ ನಾంది ಹಾಡಿದೆ. ಸದ್ಯ ದೆಹಲಿಯ ಮುಂಡಕಾ ಟೋಲ್ ಪ್ಲಾಜಾದಲ್ಲಿ ಪ್ರಾಯೋಗಿಕವಾಗಿ ಈ ಯೋಜನೆಯನ್ನು ಆರಂಭಿಸಲಾಗಿದೆ.
ಹೊಸ ವ್ಯವಸ್ಥೆ ಹೇಗೆ ಕಾರ್ಯನಿರ್ವಹಿಸುತ್ತದೆ?
ವಾಹನಕ್ಕೆ ಟೋಲ್ ಪಾಸ್ ಮಾಡಿದಾಗ, ಅದರ ನೋಂದಣಿ ಸಂಖ್ಯೆಯ ವಿವರಗಳನ್ನು ರಾಷ್ಟ್ರೀಯ ಮಾಹಿತಿ ಕೇಂದ್ರ ನಿರ್ವಹಿಸುತ್ತಿರುವ ‘ವಾಹನ್’ (Vahan) ಡೇಟಾಬೇಸ್ ನೊಂದಿಗೆ ಪರಿಶೀಲಿಸಲಾಗುತ್ತದೆ. ವಾಹನದ ವಿಮಾ ಪಾಲಿಸಿಯು ಅವಧಿ ಮುಕ್ತಾಯಗೊಂಡಿರುವುದು ಕಂಡುಬಂದಲ್ಲಿ, ಕೂಡಲೇ ವಾಹನ ಮಾಲೀಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಕಳುಹಿಸಲಾಗುತ್ತದೆ. ಈ ಸಂದೇಶದಲ್ಲಿ ವಾಹನ ಸಂಖ್ಯೆ, ಟೋಲ್ ದಾಟಿದ ಸಮಯ ಹಾಗೂ ವಿಮೆ ಮುಕ್ತಾಯಗೊಂಡ ದಿನಾಂಕದ ವಿವರವಿರುತ್ತದೆ.
ಭಾರಿ ದಂಡದ ಎಚ್ಚರಿಕೆ
ಮೋಟಾರು ವಾಹನ ಕಾಯ್ದೆಯಡಿ ಮಾನ್ಯತೆ ಪಡೆದ ವಿಮೆ ಇಲ್ಲದೆ ವಾಹನ ಚಾಲನೆ ಮಾಡುವುದು ಕಾನೂನುಬಾಹಿರವಾಗಿದೆ. ನಿಯಮ ಉಲ್ಲಂಘಿಸಿದರೆ ಮೊದಲ ಬಾರಿ ಟೋಲ್ ದಾಟಿದಾಗ 5,000 ರೂ. ಅಥವಾ ಮೂಲ ಪ್ರೀಮಿಯಂನ ಮೂರರಷ್ಟು ಹಣ (ಯವುದು ಅಧಿಕವೋ ಅದು) ದಂಡವಾಗಿ ವಿಧಿಸಲಾಗುತ್ತದೆ. ಅಪರಾಧ ಪುನರಾವರ್ತನೆಯಾದರೆ 10,000 ರೂ.ವರೆಗೆ ದಂಡ ಅಥವಾ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.
ಈ ಪ್ರಾಯೋಗಿಕ ಹಂತದ ಯಶಸ್ಸಿನ ಬಳಿಕ ಪ್ರಾಧಿಕಾರವು ಈ ವ್ಯವಸ್ಥೆಯನ್ನು ದೇಶಾದ್ಯಂತ ಇರುವ ಎಲ್ಲ ರಾಷ್ಟ್ರೀಯ ಹೆದ್ದಾರಿಗಳಿಗೂ ವಿಸ್ತರಿಸಲು ಸಿದ್ಧತೆ ನಡೆಸಿದೆ. ಆದ್ದರಿಂದ ವಾಹನ ಸವಾರರು ಎಚ್ಚೆತ್ತುಕೊಂಡು ತಮ್ಮ ವಾಹನಗಳ ವಿಮೆಯನ್ನು ಕಾಲಕಾಲಕ್ಕೆ ನವೀಕರಿಸಿಕೊಳ್ಳುವುದು ಉತ್ತಮ.



















